ಹಾವೇರಿ: ಜಿಲ್ಲೆಯ ಪ್ರಗತಿಪರ ರೈತರಲ್ಲಿ ಒಬ್ಬರು ಕೋಣನತಂಬಿಗೆ ಗ್ರಾಮದ ಸಿದ್ದಪ್ಪ ಚನ್ನೂರು. ಸಿದ್ದಪ್ಪ ಚನ್ನೂರು ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದರು. ಆದರೆ, ನಿರೀಕ್ಷಿತ ಪ್ರಮಾಣದ ಆದಾಯ ಆ ಬೆಳೆಗಳಲ್ಲಿ ಸಿಗದ ಹಿನ್ನೆಲೆಯಲ್ಲಿ ಈ ರೈತ ಇದೀಗ ತೋಟಗಾರಿಕಾ ಬೆಳೆಗಳತ್ತ ಮುಖಮಾಡಿದ್ದಾರೆ.
ರಾಜ್ಯದ ವಿವಿಧೆಡೆ ನಡೆಯುವ ಕೃಷಿ ಮೇಳಗಳಲ್ಲಿ ಪಾಲ್ಗೊಂಡು ಅಲ್ಲಿಯ ವಿಶೇಷ ಬೆಳೆಗಳ ಬಗ್ಗೆ ತಿಳಿದುಕೊಂಡು ತಮ್ಮ ಜಮೀನಿನಲ್ಲೂ ಬೆಳೆದಿದ್ದಾರೆ. ಅದರಲ್ಲಿ ಗೋವಾ ರಾಜ್ಯದ ಯಂಗೋರ್ಲಾದಿಂದ ವಾಟರ್ ಆ್ಯಪಲ್ ಗಿಡಗಳನ್ನು ತಂದು ಶಿದ್ದಪ್ಪ ತಮ್ಮ ತೋಟದಲ್ಲಿ ನೆಟ್ಟಿದ್ದಾರೆ. ನೋಡಲು ಗೋಡಂಬಿ ಹಣ್ಣಿನ ತರ ಇರುವ ಈ ವಾಟರ್ ಆ್ಯಪಲ್‌ಗೆ ರೋಸ್ ಆ್ಯಪಲ್ ಅಂತಲೂ ಕರೆಯುತ್ತಾರೆ. ರೈತ ತಮ್ಮ ಜಮೀನಿನಲ್ಲಿ ನಾಲ್ಕು ವರ್ಷಗಳ ಹಿಂದೆ ಎರಡು ವಾಟರ್ ಆ್ಯಪಲ್ ಸಸಿ ನೆಟ್ಟಿದ್ದರು. ''ನಾಲ್ಕು ವರ್ಷಗಳ ನಂತರ ವಾಟರ್ ಆ್ಯಪಲ್ ಫಸಲು ಬಂದಿದೆ. ವರ್ಷದಲ್ಲಿ ಎರಡು ಬಾರಿ ಫಸಲು ಬಿಡುವ ಈ ವಾಟರ್ ಆ್ಯಪಲ್ ಬೇಸಿಗೆಯಲ್ಲಿ ಹಣ್ಣು ಬಿಡುವುದು ವಿಶೇಷ. ಇದನ್ನು ತಿನ್ನುವದರಿಂದ ಹಲವು ಆರೋಗ್ಯಕರ ಲಾಭಗಳಿವೆ. ಮೂತ್ರಪಿಂಡದಲ್ಲಿನ ಹರಳುಗಳು ಕರಗುತ್ತವೆ. ಮಧುಮೇಹ ಮತ್ತು ಅಧಿಕ ರಕ್ತದ ಒತ್ತಡ ಇದ್ದವರು ಈ ಹಣ್ಣು ತಿಂದರೆ ಸಾಕು, ಅವರ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ'' ಎನ್ನುತ್ತಾರೆ ರೈತ ಸಿದ್ದಪ್ಪ.
''ಸದ್ಯ ಎರಡು ಗಿಡಗಳಿಂದ ಕ್ವಿಂಟಲ್ ಫಸಲು ಬರುತ್ತಿದ್ದು, ಕೆಜಿಗೆ ನೂರು ರೂಪಾಯಿಯಂತೆ ವಾಟರ್ ಆ್ಯಪಲ್ ಮಾರಾಟವಾಗುತ್ತಿದೆ. ಸದ್ಯ ಈ ಹಣ್ಣಿಗಿರುವ ಬೇಡಿಕೆ ನೋಡಿ ಇನ್ನೂ 20 ಗಿಡ ನೆಡಬೇಕು ಅಂದುಕೊಂಡಿದ್ದೇನೆ. ತೋಟದಲ್ಲಿ 60 ಜಂಬೂ ನೇರಳೆಗಿಡಗಳನ್ನು ಹಚ್ಚಿದ್ದು, ಅವು ಕಳೆದ ವರ್ಷದಿಂದ ಫಸಲು ಬಿಡಲಾರಂಭಿಸಿವೆ. ಅದರಲ್ಲಿ 40 ಗಿಡಗಳು ಹಣ್ಣು ಬಿಡುತ್ತಿವೆ. ಈ ವರ್ಷ ಒಂದೊಂದು ಗಿಡದಿಂದ ಸುಮಾರು 10 ಕೆಜಿ ನೇರಲೆ ಹಣ್ಣು ಬಿಟ್ಟರೆ ಸಾಕು, 40 ಸಾವಿರ ರೂಪಾಯಿ ಆದಾಯ ಸಿಕ್ಕಂತಾಗುತ್ತದೆ'' ಎಂದು ಸಿದ್ದಪ್ಪ ತಿಳಿಸಿದರು.
ಸಿದ್ದಪ್ಪ ಕೃಷಿಮೇಳಗಳಿಗೆ ಭೇಟಿ ನೀಡುವುದಲ್ಲದೇ ಕೃಷಿಗೆ ಸಂಬಂಧಿಸಿದ ಸುದ್ದಿಗಳನ್ನು ಯೂಟ್ಯೂಬ್ನಲ್ಲಿ ವೀಕ್ಷಿಸುತ್ತಾರೆ. ಜೊತೆಗೆ ಕೃಷಿ ಅಧಿಕಾರಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಹೊಸ ಹೊಸ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಬೆಳೆಯಲು ಹೆಚ್ಚು ಉತ್ಸುಕರಾಗಿದ್ದಾರೆ. ಒಂದು ಎಕರೆ 30 ಗುಂಟೆ ಜಮೀನಿನಲ್ಲಿ 60 ಜಂಬೂನೇರಳೆ, 600 ಶ್ರೀಗಂಧ, ವಾಟರ್ ಆ್ಯಪಲ್, ಮಾವು, ತೆಂಗು, 150 ದಾಲ್ಚಿನ್ನಿ, ಬೆಣ್ಣಿಹಣ್ಣು ಬೆಳೆದಿದ್ದಾರೆ. ಸಿದ್ದಪ್ಪ ಜೀನುಸಾಕಾಣಿಕೆಯನ್ನು ಸಹ ಮಾಡುತ್ತಿದ್ದಾರೆ.
ಕವಳಿಹಣ್ಣು, ನಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿಯಲಾಗಿದೆ. ತೋಟಕ್ಕೆ ಜೀವಾಮೃತ ಮಾತ್ರ ಬಳಕೆ ಮಾಡುತ್ತಾ ಬಂದಿದ್ದೇನೆ. ಜೀವಾಮೃತ ಕೊಟ್ಟಿಗೆ ಗೊಬ್ಬರವನ್ನು ವರ್ಷಕ್ಕೆ ಎರಡು ಬಾರಿ ಹಾಕುತ್ತೇವೆ. ಇದರಿಂದ ತಮ್ಮ ತೋಟದಲ್ಲಿ ಸಮೃದ್ಧ ಫಸಲು ಬರುತ್ತಿದೆ. ಪ್ರಸ್ತುತ ಕೃಷಿ ಕಾರ್ಯಕ್ಕೆ ಹೆಚ್ಚು ಕೂಲಿಕಾರ್ಮಿಕರು ಸಿಗುತ್ತಿಲ್ಲ. ಈ ರೀತಿ ತೋಟ ಮಾಡಿದರೆ, ಮನೆಯಲ್ಲಿರುವ ನಾವೆ ನಿಭಾಯಿಸಬಹುದು. ಸದ್ಯ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣದಲ್ಲಿ ಹೆಚ್ಚು ಒಲವಿರದ ನಮ್ಮ ಅಣ್ಣನ ಮಗ ಕೃಷಿಕಡೆ ಹೆಚ್ಚು ಆಸಕ್ತಿ ತೋರಿಸಿದ್ದಾನೆ. ಅವನು ಸಹ ತೋಟದ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದಾನೆ ರೈತ ಸಿದ್ದಪ್ಪ ತಿಳಿಸಿದರು.
ಇದನ್ನೂ ಓದಿ:ನಮಗೆ ನಿರೀಕ್ಷೆಗಿಂತ ಜಾಸ್ತಿ ಮತಗಳು ಬರುತ್ತವೆ, ಯಾವುದೇ ಭಯ ಇಲ್ಲ: ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ