ತುಮಕೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಆರೋಪಿಯನ್ನು ಟ್ರ್ಯಾಕ್ ಮಾಡುತ್ತಾ ಇದ್ದೇವೆ. ಆತ ಬಸ್ನಲ್ಲಿ ಪ್ರಯಾಣ ಮಾಡಿದ್ದಾನೆ ಎಂಬ ಮಾಹಿತಿ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಆರೋಪಿ ಯಾವ್ಯಾವ ದಿಕ್ಕಿನಲ್ಲಿ ಹೋಗಿದ್ದಾನೆ ಅನ್ನೋದನ್ನು ಕಂಡು ಹಿಡಿಯಬೇಕಿದೆ.
ಏಳೆಂಟು ತಂಡಗಳನ್ನು ಮಾಡಿ ಹುಡುಕುತ್ತಾ ಇದ್ದೇವೆ. ಸಿಸಿಬಿ ಜೊತೆಗೆ ಎನ್‌ಐಎನವರು ತನಿಖೆ ಮಾಡುತ್ತಿದ್ದಾರೆ. ಹಾಗಾಗಿ ಸಿಸಿಬಿಯವರು ಯಾವ ಬಸ್ನಲ್ಲಿ, ಯಾವ ರೂಟ್‌ನಲ್ಲಿ ಹೋಗಿದ್ದಾನೆ ಎಂಬ ಪ್ರಶ್ನೆ ಮೇಲೆ ತನಿಖೆ ಮಾಡಿದಾಗ ತುಮಕೂರಿಗೆ ಬಂದಿರುವ ಮಾಹಿತಿ ಸಿಕ್ಕಿದೆ ಎಂದರು.
ಸಿಸಿಟಿವಿ ಫೂಟೇಜ್ ಸೇರಿ ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದಾರೆ. ಯಾವ ಸಮಯದಲ್ಲಿ ಹೋಗಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ಫೋಟೋಗಳು ಬೆಂಗಳೂರಿನಲ್ಲಿ ಸಿಕ್ಕಿವೆ. ಅದನ್ನು ಪರಿಶೀಲನೆ ಮಾಡಿ ಟ್ರ್ಯಾಕ್ ಮಾಡ್ತಿದ್ದಾರೆ. ನನ್ನ ಪ್ರಕಾರ ಆದಷ್ಟು ಶೀಘ್ರವಾಗಿ ಈ ಪ್ರಕರಣ ಭೇದಿಸುವ ವಿಶ್ವಾಸವಿದೆ. ಇನ್ನು ಶಂಕಿತ ಆರೋಪಿ ಸಿಗುವವರೆಗೂ ಆತನಿಗೆ ಸಂಘಟನೆಯ ನಂಟಿದೆ ಎಂದು ಹೇಳಲು ಸಾಧ್ಯವಿಲ್ಲ. ಶಂಕಿತ ನಾಲ್ವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮತ್ತೆ ದಲಿತ ಸಿಎಂ ಹೇಳಿಕೆ ವಿಚಾರ: ದಲಿತ ಸಿಎಂ ಬಗ್ಗೆ ನಾನೇನು ಮಾತನಾಡುವುದಿಲ್ಲ, ಅದರ ಬಗ್ಗೆ ಉತ್ತರ ಕೊಡಲ್ಲ. ಸ್ಥಿರವಾದಂತಹ ಸರ್ಕಾರ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ನಡಿಯುತ್ತಿದೆ. ಹಾಗಾಗಿ ದಲಿತ ಸಿಎಂ ಬಗ್ಗೆ ಮಾತನಾಡುವುದು ಈಗ ಪ್ರಸ್ತುತವೂ ಅಲ್ಲ. ಮುಂದಿನ ದಿನದಲ್ಲಿ ದಲಿತ ಸಿಎಂ ಆಗಬೇಕಾ ಎಂಬ ಪ್ರಶ್ನೆ ಬಗ್ಗೆ ಮುಂದೆ ನೋಡೋಣ ಎಂದರು.
ಸಿದ್ದಗಂಗಾ ಜಾತ್ರೆಗೆ ಬಂದ ವಿದ್ಯಾರ್ಥಿನಿ ಮೇಲೆ ಅತ್ಯಚಾರ ಪ್ರಕರಣ: ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಈಗಾಗಲೇ ಮೂವರ ಬಂಧನ ಮಾಡಲಾಗಿದೆ. ಈ ಬಗ್ಗೆ ನಾನು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು. ಬಳಿಕ ಪ್ರಕರಣದ ಬಗ್ಗೆ ಹೇಳಲಾಗುವುದು ಎಂದರು.
ಇದನ್ನೂ ಓದಿ: ಕೆಫೆ ಸ್ಫೋಟ ಆರೋಪಿ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ, ಶೀಘ್ರ ಬಂಧನ: ಪರಮೇಶ್ವರ್