ಬೆಳಗಾವಿ: "ಅಪ್ರಸ್ತುತ ವ್ಯಕ್ತಿಗಳು, ಜನರಿಂದ ತಿರಸ್ಕಾರಗೊಂಡು ಮೂಲೆಗುಂಪಾಗಿರುವವರ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಚಿವರಾದ ರೇಣುಕಾಚಾರ್ಯ, ಬಿ.ಸಿ.ಪಾಟೀಲ್‌ಗೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯಿಂದ ಯತ್ನಾಳರನ್ನು ಉಚ್ಛಾಟಿಸಬೇಕೆಂಬ ರೇಣುಕಾಚಾರ್ಯ ಹೇಳಿಕೆಗೆ ನಗರದಲ್ಲಿಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
"ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ನಾಯಕರ ಸಮ್ಮುಖದಲ್ಲಿ ಹೋರಾಟ ನಡೆಯುತ್ತಿದೆ. ನಮ್ಮ ಒಟ್ಟಾರೆ ಹೋರಾಟ ವಕ್ಫ್ ಬೋರ್ಡ್ ಮತ್ತು ಸಿದ್ದರಾಮಯ್ಯನವರ ಹಿಂದೂ ವಿರೋಧಿ ಧೋರಣೆಯ ವಿರುದ್ಧ. ವೈಯಕ್ತಿಕ ಮೇಲಾಟ, ಈ ರೀತಿಯ ಅಪಸ್ವರದ ಮಾತುಗಳಿಗೆ ಎಲ್ಲಿ ಜಾಗವಿದೆ?. ಈ ರೀತಿಯ ಮಾತು ಏಕೆ ಬರುತ್ತಿದೆ ಎಂದು ನಂಗೆ ಅರ್ಥವಾಗುತ್ತಿಲ್ಲ" ಎಂದು ತಿರುಗೇಟು ಕೊಟ್ಟರು.
"ನ.25ರಿಂದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ವಕ್ಫ್ ಹಠಾವೋ, ದೇಶ್ ಬಚಾವೋ ಹೋರಾಟ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ, ಕಿತ್ತೂರು ಕರ್ನಾಟಕಕ್ಕೆ ಬಂದಿದ್ದೇವೆ. ಇಂದು ಬೆಳಗಾವಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದೇವೆ. ವಿಜಯೇಂದ್ರ ನಮ್ಮ ರಾಜ್ಯಾಧ್ಯಕ್ಷರು, ನ.22ಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟಕ್ಕೆ ಕರೆ ಕೊಟ್ಟಿದ್ದರು. ನಾನೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಎಲ್ಲ ಕಡೆಯೂ ಕಾರ್ಯಕ್ರಮ ಯಶಸ್ವಿಯಾಗಿದೆ" ಎಂದರು.
"ಬಸನಗೌಡ ಪಾಟೀಲ ಯತ್ನಾಳ್ ರಾಜ್ಯ ಬಿಜೆಪಿ ಅತಿದೊಡ್ಡ ನೇತಾರ ಮತ್ತು ಪಕ್ಷದ ಬಹುದೊಡ್ಡ ಆಸ್ತಿ. 1994ರಲ್ಲಿ ಯತ್ನಾಳ್ ಚುನಾಯಿತ ಪ್ರತಿನಿಧಿಯಾದವರು. ವಾಜಪೇಯಿ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗಿದ್ದರು. ಈ ಭಾಗದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಯತ್ನಾಳ್ ಹೊಂದಿದ್ದಾರೆ. ಅವರ ಜನಪ್ರಿಯತೆ ಬಿಜೆಪಿಗೆ ಲಾಭ ತಂದು ಕೊಡಲಿದೆ ಎಂಬುದು ಹೈಕಮಾಂಡ್ ಗಮನಕ್ಕಿದೆ" ಎಂದು ಹೇಳಿದರು.
ನಮ್ಮದು ವ್ಯಕ್ತಿ ವಿರುದ್ಧದ ಹೋರಾಟವಲ್ಲ: ವಿಜಯಪುರದಲ್ಲಿ ಯತ್ನಾಳ್ ಅಹೋರಾತ್ರಿ ಧರಣಿ ನಡೆಸಿದ್ದರು. ಜೆಪಿಸಿ ಅಧ್ಯಕ್ಷರೂ ಭೇಟಿ ನೀಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಹೋರಾಟದಲ್ಲಿ ಭಾಗಿಯಾಗಿದ್ದರು. ಜನರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರು ಹೋರಾಟವನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲೂ ನಾನು ಪಾಲ್ಗೊಂಡಿದ್ದೇನೆ. ವಿಜಯೇಂದ್ರ, ಯತ್ನಾಳ್, ರಮೇಶ್ ಜಾರಕಿಹೊಳಿ, ನಮ್ಮ ಕಾರ್ಯಕರ್ತರ ಗುರಿ ಒಂದೇ. ಅದು ವಕ್ಫ್ ಭೂ ಕಬಳಿಕೆಗೆ ತಡೆ ಹಾಕುವುದು. ಇದರಲ್ಲಿ ಅಪಸ್ವರ, ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆಯೋ, ನಾಲ್ಕು ಬಾಗಿಲಾಗಿದೆಯೋ? ಎಂಬ ಪ್ರಶ್ನೆಗೆ ಉತ್ತರಿಸಿ, "ಊರ ತುಂಬe ಬಾಗಿಲು ಇರೋದು ಕಾಂಗ್ರೆಸ್‌ನಲ್ಲಿ. ನಮ್ಮಲ್ಲಿ ಒಂದೇ ಬಾಗಿಲು, ಒಂದೇ ಹೋರಾಟ, ಒಂದೇ ಗುರಿ. ಮುಡಾ ವಿರುದ್ಧ ಪಾದಯಾತ್ರೆ ಮಾಡಿದ್ದೇವೆ, ವಾಲ್ಮೀಕಿ, ವಕ್ಫ್ ವಿರುದ್ಧ ಧ್ವನಿ ಎತ್ತಿದ್ದೇವೆ. ನಮ್ಮಲ್ಲಿ ಮನೆ ಒಂದು ಮೂರು ಬಾಗಿಲಿಲ್ಲ, ಕಾಂಗ್ರೆಸ್‌ನಲ್ಲಿ ಎಲ್ಲರೂ ಒಂದೊಂದು ಬಾಗಿಲು ಓಪನ್ ಮಾಡುತ್ತಿದ್ದಾರೆ" ಎಂದು ಲೇವಡಿ ಮಾಡಿದರು.
ಇನ್ನು, "ಸಿದ್ದರಾಮಯ್ಯ ಚೇರ್ ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಸಿಎಂ ಚೇರ್ ಮೇಲೆ ಕುಳಿತುಕೊಳ್ಳಲು ಡಿಕೆಶಿ ಕಾಯುತ್ತಿದ್ದಾರೆ. ಈ ಮಧ್ಯೆ ನಾನು ಸಿಎಂ ಆಗಬೇಕು, ಅಧ್ಯಕ್ಷನಾಗಬೇಕೆಂದು ಸತೀಶ್ ಜಾರಕಿಹೊಳಿ ಬಯಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ಕೂಡ ಸಿಎಂ ಕುರ್ಚಿಗೆ ಪ್ರಯತ್ನಿಸುತ್ತಿದ್ದಾರೆ" ಟೀಕಿಸಿದರು.
ಇದನ್ನೂ ಓದಿ: ಕೆಲವರು ಯತ್ನಾಳ್ ಹೆಗಲ ಮೇಲೆ ಗನ್ ಇಟ್ಟು ಗುಂಡು ಹೊಡೆಯುತ್ತಿದ್ದಾರೆ: ವಿಜಯೇಂದ್ರ