ಬೆಂಗಳೂರು: ಕೈಗಾರಿಕೆಗಳು ಮತ್ತು ರಾಜ್ಯವು ಅಭಿವೃದ್ಧಿ ಹೊಂದಬೇಕಾಗಿರುವುದರಿಂದ, ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50% ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75% ನೀಡಲು ಮುಂದಾಗಿರುವ ಪ್ರಸ್ತಾವಿತ ವಿಧೇಯಕವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಒತ್ತಾಯಿಸಿದ್ದಾರೆ.
ಕನ್ನಡಿಗರಿಗಾಗಿ ಉದ್ಯೋಗ ಕೋಟಾದ ಕುರಿತಾದ ಬಿಲ್ ಕುರಿತು ಎಫ್‌ಕೆಸಿಸಿಐನ ಅಭಿಪ್ರಾಯ ಹಂಚಿಕೊಂಡಿರುವ ಅವರು, ಗ್ರೂಪ್ 'ಸಿ' ಮತ್ತು 'ಡಿ' ಗಾಗಿ 100% ಮೀಸಲಾತಿಯು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಕನ್ನಡಿಗರಿಗೆ ವಿಶೇಷವಾಗಿ ಮ್ಯಾನೇಜ್‌ಮೆಂಟ್ ವರ್ಗದಲ್ಲಿ ಉದ್ಯೋಗ ಸುಮಾರು 25% ಮೀಸಲಾತಿ ನೀಡಬೇಕೆಂಬುದು ಎಫ್‌ಕೆಸಿಸಿಐನ ಬಲವಾದ ಆಗ್ರಹವಾಗಿದೆ. ಇದು ಕೈಗಾರಿಕೆಗಳಿಗೆ ಮತ್ತು ಕನ್ನಡಿಗರ ಹಿತಾಸಕ್ತಿಗೆ ಅನುಕೂಲಕರವಾಗಿದೆ ಎಂದಿದ್ದಾರೆ.
ಕೈಗಾರಿಕೆ, ವಾಣಿಜ್ಯ ಮತ್ತು ಸೇವಾ ವಲಯಗಳಿಗೆ ಅಂಗಸಂಸ್ಥೆಗಾಗಿ ಎಫ್‌ಕೆಸಿಸಿಐ, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೋಟಾದ ಕರಡು ವಿಧೇಯಕದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸುವ ಸರ್ಕಾರದ ಗುರಿಯನ್ನು ಸ್ವಾಗತಿಸುತ್ತದೆ. ನಮ್ಮ ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳ ಸ್ಥಾಪನೆಯಲ್ಲಿ ಕನ್ನಡಿಗರಿಗೆ ಅವರ ಉದ್ಯೋಗಕ್ಕಾಗಿ ಉತ್ತೇಜಿಸಲು ಸಿದ್ಧವಾಗಿದೆ. ತಾಂತ್ರಿಕ ಕೇಂದ್ರವಾಗಿರುವ ಕರ್ನಾಟಕವು ತಂತ್ರಜ್ಞಾನದಲ್ಲಿ ಮುಂದಿದೆ ಮತ್ತು ನಿರ್ದಿಷ್ಟವಾಗಿ ಬೆಂಗಳೂರು ದೇಶದಲ್ಲಿಯೇ ಪ್ರಮುಖ ಸ್ಥಾನವನ್ನು ಹೊಂದಿದೆ. ಸಾಮಾನ್ಯವಾಗಿ ರಾಜ್ಯವು ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಆದರೆ ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರೆಯಲು ಮತ್ತು ರಾಷ್ಟ್ರದ ಪ್ರಮುಖ ಕೈಗಾರೀಕರಣಗೊಂಡ ರಾಜ್ಯವಾಗಲು ನಮಗೆ ನುರಿತ ಪ್ರತಿಭಾವಂತರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಕೋಟಾದ ಕುರಿತು ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಲು ವಾಣಿಜ್ಯ, ಕೈಗಾರಿಕೆಗಳ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಐಟಿ ಕಂಪನಿಗಳು ಮತ್ತು ಸರ್ಕಾರವನ್ನು ಒಳಗೊಂಡ ಪಾಲುದಾರರ ಸಭೆಯನ್ನು ಆದಷ್ಟು ಬೇಗ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಮೇಶ್ ಚಂದ್ರ ವಿನಂತಿಸಿದ್ದಾರೆ.