ಬೆಂಗಳೂರು: ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ್ದ ಜಿ.ಟಿ.ವರ್ಲ್ಡ್ ಶಾಪಿಂಗ್ ಮಾಲ್ ಮಾಲೀಕರು ಮತ್ತು ಸೆಕ್ಯುರಿಟಿ ಗಾರ್ಡ್ ಅರುಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮರಾಜ್ ಗೌಡ ಎಂಬವರು ನೀಡಿರುವ ದೂರಿನನ್ವಯ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
'ಮಾಲ್‌ನ ಸೆಕ್ಯುರಿಟಿ ಗಾರ್ಡ್‌ಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡದೆ ರೈತನಿಗೆ ಅವಮಾನವಾಗುವಂತೆ ನಡೆದುಕೊಳ್ಳಲಾಗಿದೆ' ಎಂದು ಆರೋಪಿಸಿ ಧರ್ಮರಾಜ್ ದೂರು ನೀಡಿದ್ದಾರೆ. ಇದರನ್ವಯ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಹಾವೇರಿ ಮೂಲದ ನಾಗರಾಜ್ ಎಂಬವರು ತನ್ನ ತಂದೆಯೊಂದಿಗೆ ಜಿ.ಟಿ.ಮಾಲ್‌ಗೆ ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ಪಂಚೆ ಧರಿಸಿದ್ದರು ಎಂಬ ಕಾರಣಕ್ಕೆ ನಾಗರಾಜ್ ಅವರ ತಂದೆಗೆ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಬ್ಬಂದಿಯಲ್ಲಿ ಮನವಿ ಮಾಡಿದರೂ ಸಹ ಮಾಲ್ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಇದಕ್ಕೆ ಕಾರಣವೇನು ಎಂದು ನಾಗರಾಜ್ ಮಾಲ್ ಮೇಲ್ವಿಚಾರಕರನ್ನು ಪ್ರಶ್ನಿಸಿದಾಗ, "ಈ ರೀತಿ ಬಟ್ಟೆ ಧರಿಸಿದವರಿಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಉನ್ನತ ಅಧಿಕಾರಿಗಳು ಸೂಚಿಸಿದ್ದಾರೆ" ಎಂದು ಸೆಕ್ಯುರಿಟಿ ಗಾರ್ಡ್ ಉತ್ತರಿಸಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ನಾಗರಾಜ್ ಹಂಚಿಕೊಂಡಿದ್ದರು. ಆ ಬಳಿಕ ಮಾಲ್ ಸಿಬ್ಬಂದಿಯ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕೆಲವು ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ದವು. ನಂತರ ಎಚ್ಚೆತ್ತ ಮಾಲ್ ಸಿಬ್ಬಂದಿ ರೈತ ಫಕೀರಪ್ಪರನ್ನು ಕರೆದು ಕ್ಷಮೆಯಾಚಿಸಿ, ಸನ್ಮಾನಿಸಿದ್ದರು.
ಭದ್ರತಾ ಸಿಬ್ಬಂದಿಯ ಅಚಾತುರ್ಯದಿಂದ ಈ ರೀತಿಯ ಘಟನೆ ನಡೆದಿದೆ. ಇದಕ್ಕೆ ಕ್ಷಮೆ ಯಾಚಿಸುವುದಾಗಿ ಮಾಲ್ ಸಿಬ್ಬಂದಿ ತಿಳಿಸಿದ್ದರು. ''ನಿನ್ನೆ ಮಧ್ಯಾಹ್ನ ವ್ಯಕ್ತಿಯೊಬ್ಬರು ಪಂಚೆಯಲ್ಲಿ ಮಾಲ್‌ಗೆ ಬಂದಿದ್ದರು. ಪಂಚೆಯನ್ನು ಮೊಣಕಾಲಿನ ತನಕ ಧರಿಸಿ ನಿಂತಿದ್ದರು. ಕೆಳಗಿನ ಮಹಡಿಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿತ್ತು. ವಿಚಾರವನ್ನು ಮ್ಯಾನೇಜ್‌ಮೆಂಟ್ ಗಮನಕ್ಕೆ ತರಲಾಗಿತ್ತು. ಸಂಜೆ ಮತ್ತೆ ರೈತರೊಬ್ಬರು ಪಂಚೆ ಧರಿಸಿ ಬಂದಿದ್ದರು. ಈ ಸಮಯದಲ್ಲಿ ನಾವು ತಡೆದು, ಮ್ಯಾನೇಜ್‌ಮೆಂಟ್ ಗಮನಕ್ಕೆ ತಂದಿದ್ದೆವು. ಆದರೆ, ಉದ್ದೇಶಪೂರ್ವಕವಾಗಿ ತಡೆದಿಲ್ಲ. ಮ್ಯಾನೇಜ್‌ಮೆಂಟ್‌ನಿಂದ ಉತ್ತರ ಬರುವ ತನಕ ಕಾಯಿಸಿದ್ದೇವಷ್ಟೇ'' ಎಂದು ಸೆಕ್ಯೂರಿಟಿ ಅರುಣ್ ಸ್ಪಷ್ಟನೆ ನೀಡಿದ್ದರು.