ಚಿಕ್ಕಮಗಳೂರು: ಬಿಜೆಪಿ ಹಿರಿಯ ನಾಯಕ ಈಶ್ವರಪ್ಪನವರ ಜೊತೆ ಹೈ ಕಮಾಂಡ್ ಮಾತನಾಡುತ್ತೆ. ಈಶ್ವರಪ್ಪ ನಿರ್ಧಾರದಿಂದ ಪಕ್ಷಕ್ಕೆ ಮಾರಕ ಆಗಬಾರದು. ಮೂರು ಸಲ ರಾಜ್ಯ ಬಿಜೆಪಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದವರು. ದೇಶದಲ್ಲಿ ಒಂದೊಂದು ಸೀಟು ಕೂಡ ಅಮೂಲ್ಯವಾದದ್ದು, ನಾವೆಲ್ಲ ಒಂದಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು,ಈಶ್ವರಪ್ಪ ಅವರಿಗೂ ವಿನಂತಿ ಮಾಡಿಕೊಳ್ಳುತ್ತೇನೆ. ನಿಮ್ಮ ನಿರ್ಣಯ ಪಕ್ಷಕ್ಕೆ ,ದೇಶಕ್ಕೆ ಹಿತವಾಗಿರಬೇಕು. ಅವರ ನಿರ್ಧಾರವನ್ನು ಮರು ಪರಿಶೀಲನೆ ಮಾಡಿಕೊಳ್ಳಬೇಕು. ನಮ್ಮ ಪಕ್ಷದ ವರಿಷ್ಠರು ಈಶ್ವರಪ್ಪ ನವರ ಮನವೊಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಈಶ್ವರಪ್ಪ ಅವರ ನಿರ್ಧಾರದಿಂದ ಪಕ್ಷಕ್ಕೆ ಹಾನಿಯಾಗಬಾರದು. ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾನು 95 ರ ನಂತರ ಪಕ್ಷದಲ್ಲಿ ಏನನ್ನು ಕೇಳಿ ಪಡೆದಿಲ್ಲ. ಅಭ್ಯರ್ಥಿ ಘೋಷಣೆಯಾಗಿದೆ. ನಾನೇ ಅವರು ಅವರೇ ನಾನು ಎಂದು ಕೆಲಸ ಮಾಡುತ್ತೇನೆ. ಪಕ್ಷವನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ.
ಯಾರು ಸ್ವಾರ್ಥದ ರಾಜಕಾರಣ ಮಾಡುತ್ತಾರೆ. ಅವರು ಪಕ್ಷವನ್ನ ಬಲಿಕೊಡುವ ಕೆಲಸ ಮಾಡುತ್ತಾರೆ. ನಾನು ಪಕ್ಷ ಹಿತಕ್ಕಾಗಿ ರಾಜಕಾರಣ ಮಾಡಿದ್ದೇನೆ. ನಮಗೆ ಅವಕಾಶ ಸಿಕ್ಕಾಗ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಪಕ್ಷ ಬಲ ಪಡಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಪಕ್ಷದ ಹಿರಿಯರು ಈಶ್ವರಪ್ಪರ ಕೋಪ ಶಮನ ಮಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ: ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಕೋಪಗೊಂಡಿರುವ ಈಶ್ವರಪ್ಪನವರನ್ನು ಶಮನ ಮಾಡುವ ಕೆಲಸವನ್ನು ಪಕ್ಷದ ಹಿರಿಯರು ಮಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಮೊನ್ನೆ ಸಂಜೆ ಈಶ್ವರಪ್ಪನವರ ಮನೆಗೆ ಹೋಗಿ ಮಾತನಾಡುವ ಪ್ರಯತ್ನ ಮಾಡಿದೆ. ಅವರು ಕೋಪಗೊಂಡಿದ್ದಾರೆ. ಅವರು ಪಕ್ಷಕ್ಕಾಗಿ ಬಹಳ ದೊಡ್ಡ ಯೋಗದಾನ ಮಾಡಿದ್ದಾರೆ. ಅವರು ಹಿಂದುತ್ವ, ರಾಷ್ಟ್ರ, ಮೋದಿ ಎಲ್ಲವು ಅವರ ರಕ್ತದಲ್ಲಿ ಬಂದಿದೆ. ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳುವವರಲ್ಲ. ಅವರನ್ನು ನಮ್ಮ ನಾಯಕರುಗಳು ಭೇಟಿ ಮಾಡಿ ಮಾತನಾಡುತ್ತಿದ್ದಾರೆ. ಅವರು ಸಿಟ್ಟಿನಲ್ಲಿದ್ದಾರೆ. ಯಡಿಯೂರಪ್ಪನವರು ಸೀಟು ಕೊಡುವುದಾಗಿ ಹೇಳಿದ್ರು ಆದರೆ ಅವರು ಕೊಡಲಿಲ್ಲ ಎಂದು ತಿಳಿಸಿದ್ದಾರೆ.
ನಾನು ಯಡಿಯೂರಪ್ಪ ಅವರ ಬಳಿ ಈಶ್ವರಪ್ಪನವರು ಸಿಟ್ಟಾಗಿರುವುದನ್ನು ತಿಳಿಸಿದ್ದೇನೆ. ಅವರು ನಾನು ಈಶ್ವರಪ್ಪನಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ಅನೇಕರಿಗೆ ಟಿಕೆಟ್ ಸಿಕ್ಕಿಲ್ಲ ಎಂಬುದು ಬೇರೆ ಬೇರೆ ಕಾರಣಕ್ಕೆ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ. ಈಶ್ವರಪ್ಪ ಅವರ ಪುತ್ರನನ್ನು ನಮ್ಮ ರಾಷ್ಟ್ರೀಯ ನಾಯಕರು ಕರೆದು ಮಾತನಾಡುತ್ತಾರೆ. ಮೋದಿ ಅವರು ಶಿವಮೊಗ್ಗಕ್ಕೆ ಬರುವ ಮುನ್ನ ಎಲ್ಲ ಪರಿಹಾರವಾಗುವ ಸಾಧ್ಯತೆಗಳಿವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂಓದಿ:ತೆಲಂಗಾಣ ನಾಶ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷ ಸಾಕು: ಪ್ರಧಾನಿ ಮೋದಿ