ದಾವಣಗೆರೆ/ಚಿತ್ರದುರ್ಗ : ಸಿಎಂ ಸಿದ್ದರಾಮಯ್ಯ ಅವರು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಶೋಷಿತರ ಸಮಾವೇಶಕ್ಕೆ ಆಗಮಿಸಿದ್ದಾರೆ. ಈ ಸಮಾವೇಶ ಮುಗಿದಾದ ಬಳಿಕ ಅವರು ಮಾಜಿ ಸಚಿವ ಹೆಚ್ ಆಂಜನೇಯ ಅವರ ನಿವಾಸಕ್ಕೆ ಭೋಜನಕ್ಕೆ ತೆರಳಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಊಟದ ಮೆನುವಿನಲ್ಲಿ ಮಾಂಸಹಾರದ ಖಾದ್ಯಗಳು ಸಿದ್ಧವಾಗಿವೆ. ನಾಟಿ ಕೋಳಿ ಸಾರು, ಮುದ್ದೆ, ಚಪಾತಿ, ಮಟನ್ ಚಾಪ್ಸ್, ಫಿಶ್, ಬೆಂಡಿ ಫ್ರೈ, ಚಪಾತಿ ಅವರೇಕಾಳು ಪಲ್ಯ, ಚಿತ್ರಾನ್ನ, ಅನ್ನ-ಸಾಂಬಾರ್ ಹಾಗೂ ಫ್ರೂಟ್ ಸಲಾಡ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಅವರ ಆಪ್ತರು ಮಾಹಿತಿ ನೀಡಿದ್ದಾರೆ. ಶೋಷಿತರ ಸಮಾವೇಶ ಮುಗಿದ ಬಳಿಕ ಆಂಜನೇಯ ನಿವಾಸಕ್ಕೆ ತೆರಳಿ ಸಿಎಂ ಭೂರಿ ಭೋಜನ ಸವಿಯಲಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಕುರಿ ಗಿಫ್ಟ್ : ಶೋಷಿತರ ಜಾಗೃತಿ ಸಮಾವೇಶಕ್ಕೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕುರಿ ಮರಿ ಗಿಫ್ಟ್ ಕೊಡಲಾಗಿದೆ. ಮಾದಾರಯ್ಯ ಚನ್ನಯ್ಯ ಪೀಠಕ್ಕೆ ಸಿದ್ದರಾಮಯ್ಯ ಆಗಮಿಸಿದಾಗ ಬಸಣ್ಣ ಎಂಬುವರು ಕುರಿ ಕೊಟ್ಟು ಅಭಿಮಾನ ಮೆರೆದಿದ್ದಾರೆ. ಬಸಣ್ಣ ಚಿತ್ರದುರ್ಗದ ಗಾಂಧಿನಗರ ನಿವಾಸಿ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಜಾಮ್ : ಶೋಷಿತರ ಜಾಗೃತಿ ಸಮಾವೇಶದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪರಿಣಾಮ ಪರೀಕ್ಷೆಗೆ ಆಗಮಿಸಿದ ಮಕ್ಕಳು ಟ್ರಾಫಿಕ್ನಲ್ಲಿ ಸಿಲುಕಿ ತೊಂದರೆ ಅನುಭವಿಸಿದ ಘಟನೆ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಎಸ್ಜೆಎಂ ರೆಸಿಡೆನ್ಶಿಯಲ್ ಶಾಲೆ ಬಳಿ ನಡೆದಿದೆ.
ಇಂದು ಸೈನಿಕ ಶಾಲೆ ಪರೀಕ್ಷೆ ನಡೆಯುತ್ತಿದ್ದು, ಬೇರೆ ಬೇರೆ ಊರುಗಳಿಗಳಿಂದ ಹಾಗೂ ಹಳ್ಳಿಗಳಿಂದ ಪರೀಕ್ಷೆ ಬರೆಯಲು ಬಂದ ಮಕ್ಕಳಿಗೆ ತೊಂದರೆಯಾಗಿದೆ. ಹೆಲಿಪ್ಯಾಡ್ನ ಬಳಿಯೇ ಪರೀಕ್ಷಾ ಕೇಂದ್ರ ಇರುವ ಕಾರಣ, ಕೆಲ ಮಕ್ಕಳು ತಡವಾಗಿ ಪರೀಕ್ಷೆಗೆ ಆಗಮಿಸಿರುವ ಘಟನೆ ನಡೆದಿದೆ.
ಇದರಿಂದ ಮಕ್ಕಳ ಪೋಷಕರು ಸಿಎಂ ಸಿದ್ದರಾಮಯ್ಯ ಹಾಗೂ ಸಮಾವೇಶ ಆಯೋಜನೆ ಮಾಡಿರುವ ಮುಖಂಡರಿಗೆ ಹಿಡಿಶಾಪ ಹಾಕಿದ್ರು. ಈ ವೇಳೆ ಪ್ರತಿಕ್ರಿಯಿಸಿದ ಪೋಷಕರು, ಈ ಸಮಾವೇಶದಿಂದ ವಿಪರೀತ ತೊಂದರೆಯಾಗಿದೆ. ಟ್ರಾಫಿಕ್ ಜಾಮ್ ಆದ ಕಾರಣ ಐದು ಕಿ.ಮೀ. ದೂರದಲ್ಲೇ ಮಕ್ಕಳು ವಾಹನ ಇಳಿದು ಓಡೋಡಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ ಎಂದಿದ್ದಾರೆ.
ಕೆಲ ಮಕ್ಕಳು ಹಾಲ್ ಟಿಕೆಟ್, ಆಧಾರ್ ಕಾರ್ಡ್ ಕಳೆದುಕೊಂಡು ಬಂದು ಪರೀಕ್ಷಾ ಕೇಂದ್ರಕ್ಕೆ ತೆರಳದೆ ಪರೀಕ್ಷೆ ಬರೆಯುವುದರಿಂದ ವಂಚಿತರಾದರು ಎಂದು ಪೋಷಕರಾದ ಈರಣ್ಣ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳ ದುರ್ಬಳಕೆ ಸಂವಿಧಾನಕ್ಕೆ ಬಗೆವ ದ್ರೋಹ'