ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಸೂರಳ್ಕರ್ ವಿಕಾಸ್ ಕಿಶೋರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣಾ ಆಯೋಗದ ಸೂಚನೆಯ ಮೇರೆಗೆ ನಿಂಬಾಳ್ಕರ್ ಅವರನ್ನು ಇಲಾಖೆಯಿಂದ ಎತ್ತಂಗಡಿ ಮಾಡಲಾಗಿದ್ದು, ಸ್ಥಳ ನಿಯೋಜಿಸಲಾಗಿಲ್ಲ. ನಿಂಬಾಳ್ಕರ್ ಪತ್ನಿ ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡುವಂತೆ ಬಿಜೆಪಿ ನಿಯೋಗ ಇತ್ತೀಚೆಗೆ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿತ್ತು.
ನೂತನ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಅವರಿಗೆ ನಿಂಬಾಳ್ಕರ್ ಶನಿವಾರ ಸಂಜೆ ಅಧಿಕಾರ ಹಸ್ತಾಂತರಿಸಿದರು. ಬಿಬಿಎಂಪಿ ವಿಶೇಷ ಆಯುಕ್ತರಾಗಿರುವ ಸೂರಳ್ಕರ್ ಇದೀಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹುದ್ದೆಯನ್ನೂ ನಿರ್ವಹಿಸಬೇಕಿದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವುದರ ಮೂಲಕ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ಸೂರಳ್ಕರ್ ಅವರು ಕೊಪ್ಪಳದಲ್ಲಿ ಜಿಲ್ಲಾಧಿಕಾರಿಯಾಗಿ, ಯಾದಗಿರಿ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಜಿ.ಪಂ ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: ಡಿಕೆ ಶಿವಕುಮಾರ್, ಹೇಮಂತ್ ನಿಂಬಾಳ್ಕರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು - Election Commission
ನಿಂಬಾಳ್ಕರ್ ವರ್ಗಾವಣೆಗೆ ಮನವಿ ಸಲ್ಲಿಸಿದ್ದ ಬಿಜೆಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ಮಾರ್ಚ್ 27ರಂದು ದೂರು ನೀಡಿತ್ತು. ಇಲಾಖೆಯ ಕಮೀಷನರ್ ಹುದ್ದೆಯಿಂದ ತಕ್ಷಣ ವರ್ಗಾವಣೆ ಮಾಡುವಂತೆ ಒತ್ತಾಯಿಸಲಾಗಿತ್ತು. ರಾಜ್ಯದೊಳಗಡೆ ಇದ್ದರೆ ಮತ್ತೆ ಪ್ರಭಾವ ಬಳಸುವ ಸಾಧ್ಯತೆ ಇದ್ದು, ಕರ್ನಾಟಕದಿಂದ ಹೊರಗಡೆ ಕೆಲಸ ಮಾಡಲು ಅವಕಾಶ ನೀಡುವಂತೆ ವಿನಂತಿಸಿದ್ದಾಗಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದರು.