ಹಾಸನ: ಇಂದು ನಡೆಯಲಿರುವ ಕಾಂಗ್ರೆಸ್ನ ಸಮಾವೇಶಕ್ಕೆ ಸಿದ್ಧತೆಗಳು ಬಹುತೇಕ ಮುಗಿದಿದೆ. ಸುಮಾರು 1ಲಕ್ಷ ಜನರು ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ನಗರದ ಸುತ್ತಲು ಬ್ಯಾನರ್ ಬಂಟಿಂಗ್ಗಳು ರಾರಾಜಿಸುತ್ತಿವೆ.
ಹಾಸನ ನಗರದ ಹೊರಹೊಲಯದಲ್ಲಿ ನಿರ್ಮಣವಾಗಿರುವ ಎಸ್.ಎಂ. ಕೃಷ್ಣ ಕ್ರೀಡಾಂಗಣದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಬೃಹತ್ ಜನಕಲ್ಯಾಣ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಸರ್ಕಾರದ ಸುಮಾರು 20ಕ್ಕೂ ಹೆಚ್ಚು ಸಚಿವರು ಒಂದೇ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
2 ಸಾವಿರ ಪೊಲೀಸ್ ನಿಯೋಜನೆ: ಸಮಾವೇಶದ ಭದ್ರತೆಗಾಗಿ 5 ಎಸ್ಪಿ, 6 ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿ, 40 ಇನ್ಸ್ಪೆಕ್ಟರ್ ಮತ್ತು 80 ಪಿ.ಎ.ಸ್.ಐಗಳನ್ನು ಒಳಗೊಂಡ ಸುಮಾರು 2,000 ಪೊಲೀಸರನ್ನು ನೆರೆ ಜಿಲ್ಲೆಗಳಾದ ಮಂಡ್ಯ, ಮೈಸೂರು ಕೊಡಗಿನಿಂದ ಕರೆಸಿಕೊಳ್ಳಲಾಗಿದೆ.
1,200 ಬಸ್ ವ್ಯವಸ್ಥೆ: ಕಾರ್ಯಕ್ರಮಕ್ಕೆ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರನ್ನು ಕರೆ ತರಲು ಹಾಸನ ವಿಭಾಗ ಒಂದರಿಂದಲೇ 500ಕ್ಕೂ ಹೆಚ್ಚು ಬಸ್ಗಳನ್ನು ಬಾಡಿಗೆಗೆ ಪಡೆಯಲಾಗಿದೆಯಂತೆ. ಹೀಗಾಗಿ ಸಾಮಾನ್ಯ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೆಂಗಳೂರಿನಿಂದ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ, ಧರ್ಮಸ್ಥಳ ಸೇರಿದಂತೆ 400 ಬಸ್ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತದೆಯಂತೆ.
ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದಿಂದ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆ ತರಲು ಸಂಸದ ಶ್ರೇಯಸ್ ಎಂ.ಪಟೇಲ್ ಪೂರ್ವಭಾವಿ ಸಭೆ ನಡೆಸಿದ್ದರೇ, ಅರಸೀಕೆರೆ ಕ್ಷೇತ್ರದಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಚನ್ನರಾಯಪಟ್ಟಣ ತಾಲೂಕಿನಿಂದ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಸುಮಾರು 30ರಿಂದ 40ಸಾವಿರ ಜನರನ್ನು ಕರೆ ತರುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ದೇಶದ GDPಯಲ್ಲಿ ಕರ್ನಾಟಕವೇ ಫಸ್ಟ್, ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ: ಸಿಎಂ