ಮೈಸೂರು: ನಮ್ಮ ರಾಜ್ಯದ ಜನರು ಬುದ್ಧಿವಂತರು, ಇಲ್ಲಿ ಬಿಜೆಪಿ ಆಟ ನಡೆಯುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ರಾಜ್ಯದ ಜನರು ಬಿಜೆಪಿಯ ಭಾವನಾತ್ಮಕ ವಿಚಾರಗಳಿಗೆ ಸೊಪ್ಪು ಹಾಕುವುದಿಲ್ಲ. ಈಗಾಗಲೇ ಭಾವನಾತ್ಮಕ ವಿಚಾರಗಳನ್ನು ದೂರ ತಳ್ಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಕೇಂದ್ರದಿಂದ ತಾರತಮ್ಯ: ಸರ್ವ ಶಿಕ್ಷಣ ಅಭಿಯಾನದ ಅನುದಾನದಲ್ಲೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಸರ್ವ ಶಿಕ್ಷ ಅಭಿಯಾನದ ಅಡಿಯಲ್ಲಿ ಪ್ರತಿ ಮಗುವಿಗೂ ಸರಾಸರಿ 5500 ರೂಪಾಯಿ ಅನುದಾನ ನೀಡಬೇಕು. ಆಯಾ ರಾಜ್ಯಕ್ಕೆ ಅನುಗುಣವಾಗಿ 10 ರಿಂದ 15ರಷ್ಟು ಅನುದಾನದಲ್ಲಿ ವ್ಯತ್ಯಾಸ ಇರುತ್ತದೆ. ನಮ್ಮ ರಾಜ್ಯದ ಪ್ರತಿ ಮಗುವಿಗೂ 5500 ರೂ. ಕೇಂದ್ರ ಅನುದಾನ ನೀಡಬೇಕು. ಆದರೆ ನಮ್ಮ ರಾಜ್ಯಕ್ಕೆ ಪ್ರತಿ ಮಕ್ಕಳಿಗೆ 2400 ರೂಪಾಯಿ ಮಾತ್ರ ನೀಡಲಾಗುತ್ತಿದ್ದು, ಇದರ ವಿರುದ್ಧ ನಾನೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದೇನೆ. ಆದರೆ ಇದುವರೆಗೂ ಭೇಟಿಗೆ ಅವಕಾಶ ಕೊಟ್ಟಿಲ್ಲ. ನಮ್ಮ ಪಾಲನ್ನು ಕೇಳಲು ನಾವು ಪ್ರತಿಭಟನೆಗೆ ಹೊರಟಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿಕ್ಷಣ ಇಲಾಖೆ ಸವಾಲಿನ ಇಲಾಖೆ: ನನಗೆ ನೀಡಿರುವ ಶಿಕ್ಷಣ ಇಲಾಖೆ ತುಂಬಾ ದೊಡ್ಡದು. ಸಿಎಂ ನನಗೆ ಬೇರೆ ಖಾತೆ ನಿಗದಿ ಮಾಡಿದ್ದರು. ಆದರೆ ಡಿ ಕೆ ಶಿವಕುಮಾರ್ ಅವರು ಟಫ್ ಇಲಾಖೆ ಕೊಡಿ ಎಂದು ಹೇಳಿದರು. ಡಿ ಕೆ ಶಿವಕುಮಾರ್ ನನ್ನ ತಂದೆಗೆ ಆತ್ಮಿಯರು, ಜೊತೆಗೆ ಅವರ ಮಾತಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಕೂಡ ಒಪ್ಪಿದರು. ನನ್ನ ಇಲಾಖೆ ಸವಾಲಿನ ಇಲಾಖೆ, ಸಮಸ್ಯೆಗಳು ಇವೆ, ರಾಜ್ಯದಲ್ಲಿ 58 ಸಾವಿರ ಸರ್ಕಾರಿ ಶಾಲೆಗಳಿದ್ದು ಅದರಲ್ಲಿ 1.20 ಕೋಟಿ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣದಲ್ಲಿ ಅವಕಾಶ ಮುಖ್ಯ. ಹಾಗಾಗಿ ಮೂರು ಪರೀಕ್ಷೆಗಳನ್ನು ಜಾರಿಗೆ ತಂದಿದ್ದೇವೆ. ದ್ವಿತೀಯ ಪಿಯುಸಿಯಲ್ಲಿ ಮೂರನೇ ಪರೀಕ್ಷೆಗೆ 1.20 ಲಕ್ಷ ಜನ ಹಾಜರಿದ್ದು, ಅದರಲ್ಲಿ 42 ಸಾವಿರ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಎಸ್ಎಸ್ಎಲ್ಸಿವರೆಗೂ ಇದೇ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಮಾರ್ಕ್ಸ್ ಕಾರ್ಡ್ನಲ್ಲಿ ಸಂಪ್ಲಿಮೆಂಟರಿ ಎನ್ನುವ ಪದ ಬಳಕೆಯನ್ನು ನಿಷೇಧ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್: ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ ಮೂರು ದಿನ ಮಕ್ಕಳಿಗೆ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇದರ ಜೊತೆಗೆ ಮಧ್ಯಾಹ್ನ ಹಾಲಿಗೆ ರಾಗಿ ಮಾಲ್ಟ್ ಹಾಕಿ ಕೊಡುವ ಚಿಂತನೆ ಮಾಡಿದ್ದೇವೆ, ಮೈಸೂರಿನ ಸಿಎಫ್ಟಿಆರ್ಐನಲ್ಲಿ ಟೆಸ್ಟ್ ನಡೆಯುತ್ತಿದೆ. ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ. ಹಿಂದೆ ವಾರದಲ್ಲಿ ಒಂದು ಮೊಟ್ಟೆ ಕೊಡುತ್ತಿದ್ದೆವು. ಈಗ ಎರಡು ಮೊಟ್ಟೆ ಕೊಡುತ್ತಿದ್ದೇವೆ. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚು ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಳೆದ ನವೆಂಬರ್ 1 ರಿಂದ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಅನ್ನು ನೀಡುತ್ತಿದ್ದೇವೆ. ಇದರಿಂದ ಮಕ್ಕಳ ಕಂಪ್ಯೂಟರ್ ಕಲಿಕೆಗೆ ಹೆಚ್ಚು ಒತ್ತು ನೀಡಿದಂತಾಗುತ್ತದೆ ಎಂದರು.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನೆ: 'ಕೇಂದ್ರ ಸರ್ಕಾರ ಸಿಎಂರನ್ನು ಕರೆದು ಮಾತನಾಡಿಸಬಹುದಿತ್ತು'-ಜಿ.ಪರಮೇಶ್ವರ್