ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ತನಿಖೆ ಸಂಬಂಧ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇಡಿ)ವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಇಂದು ಪ್ರತಿಭಟನೆ ನಡೆಸಿದ್ದಾರೆ.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಹೆಸರೇಳುವಂತೆ ನಿಗಮದ ಹಿಂದಿನ ಎಂಡಿ ಕಲ್ಲೇಶಪ್ಪ ಅವರಿಗೆ ಇಡಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಚಿವರು, ಶಾಸಕರು ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಇಡಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪೋಸ್ಟರ್ಗಳನ್ನು ಪ್ರದರ್ಶನ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಪ್ರತಿಪಕ್ಷಗಳ ವಿರುದ್ಧ ಇ.ಡಿ, ಸಿಬಿಐ, ಐಟಿ ಬಳಸುತ್ತಿರುವ ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆ ನೀಡಲಿ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು.
#WATCH | Bengaluru: Karnataka Deputy CM DK Shivakumar says, " today all legislators including ministers are protesting against the ed for forcing the assistant director of the department of social welfare to spell out the name of the cm. the minister himself had resigned to… https://t.co/7QNbwPbV2p pic.twitter.com/ixY78Ggied
— ANI (@ANI) July 23, 2024
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಾಲ್ಮೀಕಿ ಹಗರಣ ವಿಚಾರವಾಗಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಸ್ಐಟಿ ಅಧಿಕಾರಿಗಳು ವರ್ಗಾವಣೆ ಆದ ಬಹುತೇಕ ಹಣವನ್ನು ರಿಕವರಿ ಮಾಡಿದ್ದಾರೆ. ಇದರಲ್ಲಿ ಇಡಿ ಮಧ್ಯಪ್ರವೇಶಿಸುವ ಅವಶ್ಯಕತೆ ಏನಿದೆ?. ಬಲವಂತವಾಗಿ ನಮ್ಮ ಸರ್ಕಾರಿ ಅಧಿಕಾರಿಗೆ ನೀನು ಸಿಎಂ ಹಾಗೂ ಡಿಸಿಎಂ ಹೆಸರು ಹೇಳಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇಡಿ ಅಧಿಕಾರಿಗಳ ವಿರುದ್ಧ ಮತ್ತು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ. ಸದನದಲ್ಲಿ ಉತ್ತರ ಕೊಡಲು ಬಿಜೆಪಿ ನಾಯಕರು ಅವಕಾಶ ಕೊಟ್ಟಿಲ್ಲ. ಅವರ ಅವಧಿಯಲ್ಲಿ ನಡೆದ ಹಗರಣವನ್ನು ಬಿಚ್ಚಿಡುತ್ತೇವೆ ಎಂದು ಸದನದಲ್ಲಿ ಗದ್ದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಬಾಯಿ ಮುಚ್ಚಿಸಬೇಕು ಹಾಗೂ ಸಿಎಂ ಹೆಸರು ಕೆಡಿಸಬೇಕು ಎಂದು ಹುನ್ನಾರ ನಡೆಯುತ್ತಿದೆ. ಬೇರೆ ರಾಜ್ಯಗಳಲ್ಲಿ ಇಂತಹ ಪ್ರಯತ್ನ ನಡೆದಿದೆ. ಇದೀಗ ಕರ್ನಾಟಕದಲ್ಲೂ ಇಂತಹ ಪ್ರಯತ್ನ ನಡೆಸಲಾಗ್ತಿದೆ. ಅದಕ್ಕಾಗಿ ನ್ಯಾಯ ಒದಗಿಸಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ. ನಾವು ಕಾನೂನು ದುರುಪಯೋಗ ಮಾಡಲು ಹೋಗಲ್ಲ ಎಂದರು.
ಇದನ್ನೂ ಓದಿ: ಮನೆಯಿಂದ ಹೊರ ಬಂದ ಬೆಕ್ಕು: ಹೈಕೋರ್ಟ್ ಮೆಟ್ಟಿಲೇರಿದ ಜೀವ ಬೆದರಿಕೆ ಪ್ರಕರಣ - CAT CASE IN HIGH COURT