ಬೆಂಗಳೂರು: ''ವಿಶೇಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿ ಖಂಡಿಸಿದ್ದು, ಒಟ್ಟಾಗಿ ನಿಂತು ಕಾನೂನು ಹೋರಾಟ ಮಾಡಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಶೇಷ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸಂಪುಟ ಸಚಿವರ ಜೊತೆ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ''ತುರ್ತಾಗಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟ ಸಹದ್ಯೋಗಿಗಳಿಗೆ ಧನ್ಯವಾದ ಸಮರ್ಪಿಸುತ್ತೇನೆ. ಇಡೀ ಸಚಿವ ಸಂಪುಟ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷ, ಕಾರ್ಯಕರ್ತರು, ಶಾಸಕರು, ಸಚಿವರು, ಸಂಸದರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹೈಕಮಾಂಡ್ ಕೂಡ ಈ ಸಂದರ್ಭ ನಮ್ಮ ಜೊತೆ ಇರುತ್ತೇವೆ ಎಂದು ದೂರವಾಣಿ ಮೂಲಕ ಅಭಯ ನೀಡಿದ್ದಾರೆ. ರಾಜ್ಯಪಾಲರ ಈ ತೀರ್ಮಾನ ಕಾನೂನುಬಾಹಿರ, ಅಸವಿಂಧಾನಿಕವಾಗಿದೆ. ಈ ತೀರ್ಮಾನ ಕಾನೂನಾತ್ಮಕವಾಗಿಲ್ಲ. ರಾಜ್ಯಪಾಲರ ಪ್ರಾಸಿಕ್ಯೂಷನ್ ಅನ್ನು ಚಾಲೆಂಜ್ ಮಾಡುತ್ತೇವೆ'' ಎಂದು ತಿಳಿಸಿದರು.
''ಹೀಗಾಗಿ ಸಚಿವ ಸಂಪುಟ ಸಭೆ ಇದನ್ನು ಸಂಪೂರ್ಣವಾಗಿ ಖಂಡನೆ ಮಾಡಿದೆ. ರಾಜ್ಯಪಾಲರು ದೇಶದ ರಾಷ್ಟ್ರಾಧ್ಯಕ್ಷರ ಪ್ರತಿನಿಧಿಗಳು. ಅವರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ಬಿಜೆಪಿ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ಅವರು ಕಾನೂನು ರೀತಿ ನಡೆದುಕೊಳ್ಳದೇ ಇದ್ದರಿಂದ ಅವರ ನಡವಳಿಕೆಯನ್ನು ಸಚಿವ ಸಪುಟ ಅತ್ಯಂತ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರ ಅನಗತ್ಯವಾಗಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಸುತ್ತಿದೆ. ರಾಜ್ಯಪಾಲರು ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತೆ. ಅವರ ನಡವಳಿಕೆ ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವುದರಿಂದ ಅವರ ನಡೆಯನ್ನು ಖಂಡಿಸಿದ್ದೇವೆ'' ಎಂದರು.
''ರಾಜ್ಯಪಾಲರ ಪ್ರಾಸಿಕ್ಯೂಷನ್ ಸಂಬಂಧ ಕಾನೂನು ಹೋರಾಟ ಮಾಡುತ್ತೇವೆ. ಇದು ರಾಜಕೀಯ ದುರುದ್ದೇಶಪೂರಿತವಾದ ತೀರ್ಮಾನ. ಇದು ಸರ್ಕಾರ ಅಸ್ಥಿರಗೊಳಿಸಲು ಮಾಡುವಂಥ, ಸರ್ಕಾರವನ್ನು ಪತನ ಮಾಡುವ ಸಂಚು. ನಮ್ಮ ಸರ್ಕಾರ ಬಡವರ ಪರ ಸರ್ಕಾರ, ಗ್ಯಾರಂಟಿಯನ್ನು ಜಾರಿಗೆ ತಂದಿದ್ದೇವೆ. ಅವರು ಗ್ಯಾರಂಟಿಗೆ ವಿರುದ್ಧವಾಗಿದ್ದರು. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ. ಜನರ ಆಶೀರ್ವಾದ ನನಗೆ ಇದೆ, ನಮ್ಮ ಪಕ್ಷಕ್ಕೆ ಇದೆ. ಅವರು ಕುಟಿಲ ಯತ್ನದಿಂದ ಸರ್ಕಾರ ಪತನ ಮಾಡಲು ಹೊರಟಿದ್ದಾರೆ. ಅದು ಅವರ ಭ್ರಮೆಯಾಗಿದೆ'' ಎಂದು ಸಿಎಂ ಗರಂ ಆದರು.
''ನಮ್ಮ ಸರ್ಕಾರ 7 ಕೋಟಿ ಕನ್ನಡಿಗರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದೆ. ಇದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಟಿ.ಜೆ. ಅಬ್ರಾಹಂ 26.7.2024 ರಂದು ದೂರು ಕೊಡುತ್ತಾರೆ. ನನಗೆ ಅಂದೇ ರಾತ್ರಿ 10 ಗಂಟೆಗೆ ಶೋಕಾಸ್ ನೋಟಿಸ್ ರೆಡಿಯಾಗುತ್ತೆ. 23.11.2023 ರಂದು ಲೋಕಾಯುಕ್ತದವರು ಕುಮಾರಸ್ವಾಮಿ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು. ಅದಕ್ಕೆ ಇಲ್ಲಿವರೆಗೆ ಅನುಮತಿ ನೀಡಿಲ್ಲ. ಲೂಟಿಯಲ್ಲಿ ಕುಮಾರಸ್ವಾಮಿ ಪಾತ್ರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಿದ್ದರು. ನನ್ನ ಪ್ರಕರಣದಲ್ಲಿ ಯಾವುದೇ ತನಿಖೆ ನಡೆದಿಲ್ಲ. ನನ್ನ ಸಹಿ ಇಲ್ಲ. ದಾಖಲೆ ಇಲ್ಲ. ಆದರೂ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರು ಸ್ವತಂತ್ರ ಬುದ್ಧಿಯಿಂದ ಇದನ್ನು ಮಾಡಿಲ್ಲ. ಬಿ ವೈ ವಿಜಯೇಂದ್ರ, ಆರ್. ಅಶೋಕ್ ಮತ್ತು ಕೇಂದ್ರ ಸರ್ಕಾರದ ಮಾತು ಕೇಳಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ'' ಎಂದು ಸಿಎಂ ಆರೋಪಿಸಿದರು.
''ಬಿಜೆಪಿಯವರ ಮೇಲೆ ಗಂಭೀರ ಆರೋಪ ಇದ್ದರು ಅವರ ಮೇಲೆ ಅನುಮತಿ ಕೊಟ್ಟಿಲ್ಲ. ಆದರೆ, ನನ್ನ ಕೇಸ್ ನಲ್ಲಿ ಆತುರಾತುರವಾಗಿ ಅನುಮತಿ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯಪಾಲರ ಈ ಅನುಮತಿ ರಾಜಕೀಯ ಪ್ರೇರಿತ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಪಪೆಟ್ ಆಗಿ ಕೆಲಸ ಮಾಡಿದ್ದಾರೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ಮೇಲೆ 9.12.2021 ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದರು. ಇನ್ನೂ ಕೊಟ್ಟಿಲ್ಲ. ನಾವು ಪ್ರಕರಣ ಸಂಬಂಧ ಸತ್ಯಾಸತ್ಯತೆ ತಿಳಿಯಲು ನ್ಯಾಯಾಂಗ ಆಯೋಗವನ್ನು ರಚಿಸಿದ್ದೇವೆ'' ಎಂದರು.
ರಾಜ್ಯಪಾಲರೇ ರಾಜೀನಾಮೆ ಕೊಡಬೇಕು: ''ನನ್ನ ಪ್ರಕಾರ ರಾಜ್ಯಪಾಲರು ರಾಜೀನಾಮೆ ಕೊಡಬೇಕು. ಏಕೆಂದರೆ ಅವರು ಕೇಂದ್ರದ ಪಪೆಟ್ ಆಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಕಂಡ್ರೆ ಬಿಜೆಪಿಗೆ, ಕೇಂದ್ರ ಸರ್ಕಾರಕ್ಕೆ ಭಯ ಅದಕ್ಕಾಗಿ ಹೀಗೆ ಮಾಡಿದ್ದಾರೆ. ನಾವು ಇದರ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ಈ ಪ್ರಾಸಿಕ್ಯೂಷನ್ನಿಂದ ನಾವು ಇನ್ನೂ ಸದೃಢರಾಗಿದ್ದೇವೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಎಕ್ಸ್ ಪೋಸ್ ಆಗುತ್ತಿದ್ದಾರೆ'' ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.
ಇದನ್ನೂ ಓದಿ: ಮುಡಾ ಪ್ರಕರಣ: ಏನಿದು ಪ್ರಾಸಿಕ್ಯೂಷನ್ ಪ್ರಕ್ರಿಯೆ? - Prosecution against Karnataka CM