ಬೆಂಗಳೂರು: ಎಸ್.ಎಂ.ಕೃಷ್ಣ ಅವರು ಓರ್ವ ದೂರದೃಷ್ಟಿಯುಳ್ಳ ಮುತ್ಸದ್ದಿ ರಾಜಕಾರಣಿ. ಕರ್ನಾಟಕ ಮತ್ತು ದೇಶದ ರಾಜಕಾರಣದಲ್ಲಿ ದೀರ್ಘಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣರವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಅವರು ಮಾತನಾಡಿದರು.
''ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದ ಎಸ್.ಎಂ.ಕೃಷ್ಣ ಅವರು ಓರ್ವ ಸಮರ್ಥ ಆಡಳಿತಗಾರರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಗಳಲ್ಲಿ ಸದಸ್ಯರಾಗಿದ್ದ ಕೆಲವೇ ರಾಜಕಾರಣಿಗಳ ಪೈಕಿ ಕೃಷ್ಣ ಅವರೂ ಒಬ್ಬರು. ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಬೆಂಗಳೂರನ್ನು ಸಿಂಗಾಪುರ ಮಾಡಬೇಕೆಂಬ ಕನಸು ಕಂಡಿದ್ದವರು. ಅವರ ಕನಸು ನನಸಾಗಲಿಲ್ಲ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಐಟಿ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಂದು ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ, ಬೆಂಗಳೂರು ನಗರ ಭಾರತದ ಸಿಲಿಕಾನ್ ವ್ಯಾಲಿ ಆಗಬೇಕಾದರೆ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ'' ಎಂದರು.
"ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಆಗ ಬರಗಾಲವಿತ್ತು. ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಪ್ರಕರಣ ಹಾಗೂ ಕಾವೇರಿ ವಿವಾದಗಳನ್ನು ಅವರು ಜಾಣ್ಮೆಯಿಂದ ಎದುರಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ತಿಳಿಸಲೆಂದು ಮಹಾರಾಷ್ಟ್ರಕ್ಕೆ ಹೋಗಿ ಭೇಟಿಯಾದಾಗ ನೀವು ಕಾಂಗ್ರೆಸ್ ಸೇರುವುದು 'ಐತಿಹಾಸಿಕ ಅಗತ್ಯ' ಎಂದು ಹೇಳಿದ್ದರು" ಎಂದು ಸಿದ್ದರಾಮಯ್ಯ ಸ್ಮರಿಸಿದರು.
"ಸೌಮ್ಯ ಸ್ವಭಾವದ ಸಜ್ಜನ ರಾಜಕಾರಣಿ. ಎಂದಿಗೂ ದ್ವೇಷದ ರಾಜಕಾರಣ ಮಾಡಿರಲಿಲ್ಲ. ದೀರ್ಘಕಾಲ ಕರ್ನಾಟಕ, ದೇಶದ ಜನರ ಸೇವೆ ಮಾಡಿದ್ದಾರೆ. ಕೃಷ್ಣ ಅವರ ಸಾವಿನಿಂದ ಒಬ್ಬ ಉತ್ತಮ ವಾಗ್ಮಿ ಹಾಗೂ ಸಂಸದೀಯಪಟುವನ್ನು ಕಳೆದುಕೊಂಡಂತಾಗಿದೆ. ರಾಜಕೀಯವಾಗಿ ದೊಡ್ಡ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಆಶಿಸುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮುಖ್ಯಮಂತ್ರಿ ತಿಳಿಸಿದರು.
ಇದನ್ನೂ ಓದಿ: ವಿಧಾನಸಭೆ, ಪರಿಷತ್ನಲ್ಲಿ ಎಸ್.ಎಂ.ಕೃಷ್ಣಗೆ ಭಾವಪೂರ್ಣ ಶ್ರದ್ಧಾಂಜಲಿ
ಕೇಂದ್ರ ಸಚಿವ ಹೆಚ್ಡಿಕೆ ಸಂತಾಪ: ಎಸ್.ಎಂ.ಕೃಷ್ಣ ಅವರ ನಿಧನ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಅವರು ಅಜಾತಶತ್ರುವಾಗಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಡಿಕೆ, ಹಲವು ಬಾರಿ ಕೃಷ್ಣ ಅವರನ್ನು ನಾನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದೇನೆ. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದೇನೆ. ಮದ್ದೂರಿನ ಸೋಮನಹಳ್ಳಿಗೆ ನಾನೇ ಹೋಗುವೆ ಎಂದು ಹೇಳಿದರು.
ಇದನ್ನೂ ಓದಿ: ವೀರಪ್ಪನ್ ಸೆರೆಯಲ್ಲಿದ್ದ ಡಾ.ರಾಜ್ ಅವರನ್ನು SMK ಯಶಸ್ವಿಯಾಗಿ ಬಿಡಿಸಿಕೊಂಡು ಬಂದಿದ್ದೇ ರೋಚಕ!