ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಗೆದ್ದಿದ್ದು ಬಿಜೆಪಿಯಿಂದಲ್ಲ, ಅವರು ಗೆದ್ದಿದ್ದು ಕಾಂಗ್ರೆಸ್ ಓಟ್ನಿಂದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬಿಜೆಪಿಯವರು ಯಾವಾಗಲೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಇನ್ನು ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕುಳಿತು ಅಧಿಕಾರಕ್ಕೆ ಬಂದಿದೆ ಎಂದು ಲೇವಡಿ ಮಾಡಿದರು. ನಗರದಲ್ಲಿಂದು ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಈ ಹಿಂದೆ ಬಿಜೆಪಿಯನ್ನು ತೆಗಳುತ್ತಿದ್ದ ಜೆಡಿಎಸ್ ಇದೀಗ ಮೈತ್ರಿ ಮಾಡಿಕೊಂಡಿದೆ. ಮಣ್ಣಿನ ಮಕ್ಕಳು ನಾವು ಎಂದು ಹೇಳಿಕೊಳ್ಳುತ್ತಿದ್ದವರು ಬಡ ಜನರಿಗಾಗಿ ಏನನ್ನೂ ಮಾಡಿಲ್ಲ. ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದು ಬಡ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.
ನಾವು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ವೇಳೆ ಅವರ ಮನೆಗೆ ಹೋಗಿ ಅಧಿಕಾರ ಕೊಟ್ಟಿದ್ದೆವು. ಆದರೆ ಅವರು ವೆಸ್ಟೆಂಡ್ ಹೋಟೆಲ್ನಲ್ಲಿ ಕುಳಿತು ಅಧಿಕಾರ ಕಳೆದುಕೊಂಡರು ಎಂದು ಕುಟುಕಿದರು.
ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಮತ್ತು ನಾನು ನಿಮ್ಮ ಬಳಿ ಬಂದಿರೋದು ಜೈಕಾರಕ್ಕಾಗಲಿ, ಹೂ ಹಾರ ಹಾಕಿಸಿಕೊಳ್ಳಲು ಅಲ್ಲ. ನೀವು ನಮ್ಮನ್ನು ಅಧಿಕಾರಕ್ಕೆ ತಂದಿದ್ದೀರಿ. ಅದಕ್ಕೆ ಧನ್ಯವಾದ ಹೇಳಲು ಬಂದಿದ್ದೇವೆ. ದೇವರು ವರವನ್ನೂ ಕೊಡಲ್ಲ, ಶಾಪವನ್ನೂ ಕೊಡಲ್ಲ, ಅವಕಾಶವನ್ನು ಕೊಡುತ್ತಾರೆ. ಆ ಅವಕಾಶದಿಂದ ದೇಶದಲ್ಲೇ ಮಾದರಿ ಆಡಳಿತ ಮಾಡಿ ತೋರಿಸುತ್ತೇವೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಜಿಲ್ಲೆಯ ಜನ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಸ್ಟಾರ್ ಚಂದ್ರು ಪರ ಮತಬೇಟೆ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಫಲಾನುಭವಿಗಳ ಸಮಾವೇಶಗಳನ್ನು ಆಯೋಜಿಸುವ ಮೂಲಕ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಮುಂದಾಗಿದೆ. ಮಂಡ್ಯದ ಎಂಟೂ ವಿಧಾನಸಭಾ ಕ್ಷೇತ್ರದಲ್ಲೂ ಸಮಾವೇಶ ನಡೆಸಿದ್ದು ಇಂದು ಮಂಡ್ಯದಲ್ಲೂ ಅದ್ಧೂರಿಯಾಗಿ ಸಮಾವೇಶ ನಡೆಸಲಾಯಿತು. ಕಾಂಗ್ರೆಸ್ ನಡೆಸಿದ ಪ್ರತಿ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ ಅಲಿಯಾಸ್ ಸ್ಟಾರ್ ಚಂದ್ರು ಪರ ಪ್ರಚಾರ ಮಾಡುತ್ತಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಂದ್ರು ಪರ ಮತಬೇಟೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿದ ಹೆಚ್ಡಿಕೆ, ನಿಖಿಲ್