ಮೈಸೂರು : ತವರು ಜಿಲ್ಲೆಯನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನಗಳ ಕಾಲ ಮೈಸೂರು ಜಿಲ್ಲೆಯ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಹಾಗಾದರೆ ಮುಖ್ಯಮಂತ್ರಿಗಳ ಮೂರು ದಿನಗಳ ಕಾಲ ಮೈಸೂರು, ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಚಾರ ಎಲ್ಲೆಲ್ಲಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಪ್ಲಾನ್ ಹಾಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ವಾರ ಮೈಸೂರಿನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಹೆಚ್. ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಇರುವ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು.
![ಮುಖ್ಯಮಂತ್ರಿ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/31-03-2024/ka-mys01-31-03-2024-cmnews-7208092_31032024194817_3103f_1711894697_930.jpg)
ಮುಖ್ಯಮಂತ್ರಿಗಳು ಅಲ್ಲೇ ಮೂರು ದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ, ಚಾಮರಾಜನಗರ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಮುಖ್ಯಮಂತ್ರಿಗಳ ಮಗ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಶಾಸಕರುಗಳಾದ ಅನಿಲ್ ಚಿಕ್ಕಮಾದು ಹಾಗೂ ಮಡಿಕೇರಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಭೆ ನಡೆಸಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳನ್ನ ಪ್ರಚಾರ ಮಾಡಿ, ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಹೆಚ್ಚು ಮತ ಬರುವ ರೀತಿ ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆ ನಡೆಸಿದ್ದರು.
ಬಳಿಕ ಮೈಸೂರು ನಗರದಲ್ಲಿ ಪ್ರಮುಖ ಬಿಜೆಪಿ ನಾಯಕರುಗಳನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದರು.
ಸೋಮವಾರದಿಂದ ಮೂರು ದಿನ ತವರು ಜಿಲ್ಲೆಯಲ್ಲಿ ಸಿಎಂ ಚುನಾವಣಾ ಪ್ರಚಾರ : ಹೇಗಾದರೂ ಮಾಡಿ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ನ ಗೆಲ್ಲಿಸಲೇಬೇಕೆಂಬ ಉದ್ದೇಶದಿಂದ ಸ್ವತಃ ಮುಖ್ಯಮಂತ್ರಿ ಅವರು ಸೋಮವಾರ, ಮಂಗಳವಾರ, ಹಾಗೂ ಬುಧವಾರ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
![ಮುಖ್ಯಮಂತ್ರಿ ಸಿದ್ದರಾಮಯ್ಯ](https://etvbharatimages.akamaized.net/etvbharat/prod-images/31-03-2024/ka-mys01-31-03-2024-cmnews-7208092_31032024194817_3103f_1711894697_554.jpg)
ಸೋಮವಾರ ತಮ್ಮ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಹಾಗೂ ತಿ. ನರಸೀಪುರ ಕ್ಷೇತ್ರದಲ್ಲಿ ಚುನಾವಣಾ ಸಭೆ ನಡೆಸಲಿದ್ದಾರೆ. ಈ ಪ್ರದೇಶಗಳು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಬಳಿಕ ಸೋಮವಾರ ಸಂಜೆ ಬಿಷಪ್ ನಿವಾಸಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದಾರೆ.
ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿಗಳು ಮೈಸೂರಿನ ಶಂಕರಮಠಕ್ಕೆ ಭೇಟಿ ನೀಡಿ, ಶ್ರೀ ವಿದ್ಯಾಶೇಖರ ಭಾರತಿ ಶ್ರೀಗಳನ್ನ ಭೇಟಿ ಮಾಡಲಿದ್ದಾರೆ. ಆನಂತರ ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ನಡೆಸುವ ಮುಖ್ಯಮಂತ್ರಿಗಳು, ಮಂಗಳವಾರ ಸಂಜೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಿದ್ದಾರೆ. ಬಳಿಕ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಬುಧವಾರ ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡುವ ಸಿಎಂ, ಅಲ್ಲಿಂದ ಚಾಮರಾಜನಗರಕ್ಕೆ ಹೋಗಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ ಮೈಸೂರು, ಮಡಿಕೇರಿ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಹೀಗೆಯೇ ಮೂರು ದಿನ ತವರು ಜಿಲ್ಲೆಯ ಪ್ರವಾಸ ಕೈಗೊಳ್ಳುವ ಅವರು, 3 ದಿನ ಚುನಾವಣಾ ಪ್ರಚಾರ ಸಭೆ ಹಾಗೂ ಸ್ಥಳೀಯ ಮುಖಂಡರ ಸಭೆ ನಡೆಸಲಿದ್ದಾರೆ.
ಏಪ್ರಿಲ್ 3 ರಂದು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ : ಮೈಸೂರು - ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ. ಲಕ್ಷ್ಮಣ್ ಹಾಗೂ ಸುನಿಲ್ ಬೋಸ್ ಇಬ್ಬರು ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸಲಿದ್ದು, ಈ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ನಾಮಪತ್ರ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಜೊತೆಗೆ ಮೈಸೂರು ಮತ್ತು ಚಾಮರಾಜನಗರ ಹಾಗೂ ಮಡಿಕೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಆ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಕೊಡಿಸುವಂತೆ ಸಿಎಂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಮೀಕ್ಷಾ ವರದಿ ಹೇಳುವುದು ಏನು ? : ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂತರಿಕ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಕಾಂಗ್ರೆಸ್ ಪರ ಒಲವು ಇಲ್ಲದೇ ಇರುವುದು ಹಾಗೂ ಲೋಕಸಭೆಗೆ ನರೇಂದ್ರ ಮೋದಿ ಅವರ ಜನಪ್ರಿಯತೆ ಕೆಲಸ ಮಾಡುವ ಸಾಧ್ಯತೆಗಳ ಬಗ್ಗೆ ಗೊತ್ತಾಗಿದೆ.
ಇದರಿಂದ ಅಲರ್ಟ್ ಆಗಿರುವ ಮುಖ್ಯಮಂತ್ರಿ ಕಳೆದ 10 ದಿನಗಳಲ್ಲಿ ಎರಡೂ ಬಾರಿ ಮೈಸೂರಿನಲ್ಲೇ 3 ದಿನಗಳ ಕಾಲ ವಾಸ್ತವ್ಯ ಹೂಡಿದ್ದು, ಹೇಗಾದರೂ ಮಾಡಿ ಲೋಕಸಭೆ ಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ : ನನ್ನದು ಗರ್ವ ಅಲ್ಲ, ಕನ್ನಡಿಗನ ಸಹಜ ಸ್ವಾಭಿಮಾನ: ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು - Lok Sabha Election 2024