ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದೆ. ಭಾನುವಾರ ತಡರಾತ್ರಿ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಂಧನಕ್ಕೆ ಪೊಲೀಸ್ ಸಿಬ್ಬಂದಿ ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ರೌಡಿಶೀಟರ್ ಆರೋಪಿಗೆ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ರೌಡಿಶೀಟರ್ ಅಪ್ತಾಬ್ ಕರಡಿಗುಡ್ಡ ಗುಂಡೇಟು ತಿಂದ ಆರೋಪಿ.
ಭಾನುವಾರ ನಡೆದ ಗ್ಯಾಂಗ್ವಾರ್ನಲ್ಲಿ ಗಾಯಗೊಂಡಿದ್ದ ಜಾವೂರ್ ಎಂಬಾತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ದೂರು ಪಡೆದುಕೊಂಡು, ಆರೋಪಿ ಅಪ್ತಾಬ್ ಕರಡುಗುಡ್ಡ ಬಂಧನಕ್ಕೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ತಂಡ ತೆರಳಿತ್ತು. ಈ ವೇಳೆ ಅಪ್ತಾಬ್ ಪೊಲೀಸ್ ಸಿಬ್ಬಂದಿ ರಾಜು ರಾಠೋಡ್ ಮತ್ತು ಪಾಲಯ್ಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಕೂಡಲೇ ಅಲರ್ಟ್ ಆದ ಇನ್ಸ್ಪೆಕ್ಟರ್ ರಾಘವೇಂದ್ರ ಅವರು ಅಪ್ತಾಬ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಆರೋಪಿ ಸೇರಿ ಪೊಲೀಸ್ ಸಿಬ್ಬಂದಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಮಾಹಿತಿ ಮೇರೆಗೆ ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಗಾಯಾಳು ಸಿಬ್ಬಂದಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯ ಸದರ್ ಸೋಫಾ ಬ್ಯಾಹಟಿ ಪಾರ್ಕ್ ಬಳಿ ಭಾನುವಾರ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಜಾವೂರ ಬೇಪಾರಿ ಎಂಬವನಿಗೆ ಗಂಭೀರ ಗಾಯವಾಗಿತ್ತು. ಇದರಲ್ಲಿ ಜಾವೂರ ಬೇಪಾರಿ ಟೀಂ ಮತ್ತೊಂದು ಟೀಂನ ಮೇಲೆ ಹಲ್ಲೆಗೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಕೌಂಟರ್ ದೂರು ನೀಡಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಜನರನ್ನು ರಾತ್ರಿಯೇ ಬಂಧಿಸಲಾಗಿದೆ. ಆರೋಪಿ ಅಪ್ತಾಬ್ ಬುಡರಸಿಂಗಿ ಬಳಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪಿಸಿಕೊಳ್ಳಲು ಮುಂದಾಗಿದ್ದ ಸಂದರ್ಭದಲ್ಲಿ ನಮ್ಮ ಠಾಣೆ ಇನ್ಸ್ಪೆಕ್ಟರ್ ಫೈರಿಂಗ್ ಮಾಡಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ" ಎಂದು ತಿಳಿಸಿದರು.