ಚಿಕ್ಕೋಡಿ: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಯೋರ್ವ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದು ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಸುಬಲಸಾಗರ ಪ್ರೌಢಶಾಲೆಯ ವಿದ್ಯಾರ್ಥಿ ಸಿದ್ಧಾಂತ್ ನಾಯಿಕಬಾ ಗಡಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಬಡ ರೈತ ಕುಟುಂಬದಲ್ಲಿ ಹುಟ್ಟಿದ ಈ ವಿದ್ಯಾರ್ಥಿಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ಕುಮಾರ್ ಹಂಚಾಟೆ ಅವರು ವಿದ್ಯಾರ್ಥಿ ಸಿದ್ಧಾಂತ್ನನ್ನು ಇಂದು ಸನ್ಮಾನಿಸಿ ಅಭಿನಂದಿಸಿದರು.
ಬಡತನದಲ್ಲಿಯೂ ಪೋಷಕರು ಪ್ರೋತ್ಸಾಹ: ವಿದ್ಯಾರ್ಥಿ ಸಿದ್ಧಾಂತ್ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಸಾಧನೆಗೆ ಶಿಕ್ಷಕರು, ಪೋಷಕರು ಕಾರಣ. ನಾನು ನಿರಂತರ ಪ್ರಯತ್ನ ಮಾಡಿದ್ದೇನೆ. ಪ್ರತಿದಿನ 7 ರಿಂದ 8ಗಂಟೆ ಕಾಲ ಆಸಕ್ತಿಯಿಂದ ಓದುತ್ತಿದ್ದೆ. ಈ ರೀತಿ ಓದಿದ ಪ್ರತಿಫಲವೇ ಇಂದು ರಾಜ್ಯಕ್ಕೆ ದ್ವಿತೀಯ ಸ್ಥಾನ ಬರಲು ಸಾಧ್ಯವಾಗಿದೆ. ಬಡತನದಲ್ಲಿಯೂ ಕೂಡ ಪೋಷಕರು ನನ್ನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ ಎಂದು ವಿದ್ಯಾರ್ಥಿ ಸಂತಸ ಹಂಚಿಕೊಂಡಿದ್ದಾನೆ.
ನಾನು ಮೊಬೈಲ್ನ್ನು ವಿದ್ಯಾಭ್ಯಾಸಕ್ಕೆ ಅಷ್ಟೇ ಬಳಸುತ್ತಿದ್ದೆನು. ಇದರಿಂದ ಇಷ್ಟು ಉತ್ತಮವಾಗಿ ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ನಾನು ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಹೊಂದಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿಯ ಈ ಸಾಧನೆಗೆ ಕಾಗವಾಡ ಶಾಸಕ ರಾಜು ಕಾಗೆ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಹಾಗೂ ಜಿಲ್ಲಾಧಿಕಾರಿ ಡಾ. ನಿತೇಶ್ ಪಾಟೀಲ್ ಸೇರಿದಂತೆ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಫಸ್ಟ್ ಬಂದ ರೈತನ ಮಗಳು: IAS ಅಧಿಕಾರಿಯಾಗುವ ಕನಸು - SSLC Topper