ಮಂಡ್ಯ: ''ಬಿಜೆಪಿಯವರು ಮೊದಲು ಈಶ್ವರಪ್ಪ ಮತ್ತು ಸಂಸದ ಅನಂತಕುಮಾರ್ ಹೆಗಡೆ ಅಂತವರಿಗೆ ಗುಂಡಿಕ್ಕಲಿ'' ಎಂದು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸಂಸದ ಡಿ.ಕೆ ಸುರೇಶ್ ಕುರಿತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಕೇಸರಿ ಬಣ್ಣದಲ್ಲೇ ಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿರುವ ಈಶ್ವರಪ್ಪ, ಸಂವಿಧಾನ ಬದಲಾಯಿಸಬೇಕು ಎಂದು ಹೇಳಿದ್ದ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಅವರ ಪಾರ್ಟಿಯವರೇ ಗುಂಡಿಕ್ಕಲಿ, ಅಮೇಲೆ ಬೇರೆ ನೋಡೋಣ'' ಎಂದರು.
''ಬಿಜೆಪಿ ಮುಖಂಡರು ಮಾತನಾಡಿದ ರೀತಿ ಕಾಂಗ್ರೆಸ್ ಶಾಸಕರು, ಸಂಸದರು ರಾಷ್ಟ್ರಕ್ಕೆ ಮತ್ತು ಸಂವಿಧಾನದ ಬಗ್ಗೆ ಯಾವತ್ತೂ ಹೇಳಿಕೆ ನೀಡಿಲ್ಲ. ರಾಜ್ಯಕ್ಕೆ ಆದ ಆರ್ಥಿಕ ಅನ್ಯಾಯದ ಬಗ್ಗೆ ಡಿ.ಕೆ ಸುರೇಶ್ ಮಾತನಾಡಿದ್ದಾರೆ. ಈಶ್ವರಪ್ಪರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್ ಕಟ್ ಆಗಿದೆ. ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ರಾಷ್ಟ್ರ, ರಾಜ್ಯದ ಹಿತ ಕಾಯುವ ಪ್ರಶ್ನೆಗೆ ಉತ್ತರ ಕೊಡುತ್ತೇನೆ, ರಾಜಕಾರಣಕ್ಕಾಗಿ ನಾಲಿಗೆ ಹರಿಬಿಟ್ರೆ ಉತ್ತರಿಸಲ್ಲ'' ಎಂದು ಜರಿದರು.
ಸಂಸದೆ ಸುಮಲತಾ ಕಾಂಗ್ರೆಸ್ ಸೇರುತ್ತಾರೆ ಎಂಬ ಜಿಟಿ ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ಬಿಜೆಪಿ ಬೆಂಬಲಿತ ಸುಮಲತಾ ಅಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೂಡ ಕೇಳಿದ್ದಾರೆ. ಹಾಗೆಯೇ ಜಿಟಿಡಿ ಹೇಳಿಕೆಗೂ, ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಬಳಿಕ ಉದ್ಯಮಿ ಸ್ಟಾರ್ ಚಂದ್ರು ಬಗ್ಗೆ ಕೇಳಿದ ಪ್ರಶ್ನೆಗೆ, ''ಚಂದ್ರು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಬಗ್ಗೆ ಅಂತಿಮವಾಗಿ ಪಕ್ಷ ತೀರ್ಮಾನಿಸಲಿದೆ'' ಎಂದ ಅವರು ''ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ ಪಟ್ಟಿಯು ಫೈನಲ್ ಆಗಲಿದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಅಮೃತ ಕಾಲವಲ್ಲ, ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ: ಸಿಎಂ ಸಿದ್ದರಾಮಯ್ಯ