ಬೆಂಗಳೂರು: ರಾಜ್ಯದ ಆರು ವನ್ಯಜೀವಿಧಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಶಿಫಾರಸ್ಸಿನಂತೆ ರಾಜ್ಯದಲ್ಲಿನ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮ, ಕಾಮಸಂದ್ರ ವನ್ಯಜೀವಿಧಾಮ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ (ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ), ಕಪ್ಪತಗುಡ್ಡ ವನ್ಯಜೀವಿಧಾಮ, ಅಣಶಿ ರಾಷ್ಟ್ರೀಯ ಉದ್ಯಾನವನ ಮತ್ತು ದಾಂಡೇಲಿ ವನ್ಯಜೀವಿಧಾಮ (ಕಾಳಿ ಹುಲಿ ಸಂರಕ್ಷಿತ ಪ್ರದೇಶ) ಹಾಗೂ ಕಾವೇರಿ ವಿಸ್ತರಿತ ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು 'ಪರಿಸರ ಸೂಕ್ಷ್ಮ ವಲಯ'ವೆಂದು ಘೋಷಿಸುವ ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಅನುಸಾರ ಸಂರಕ್ಷಿತ ವಲಯಗಳಾದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಧಾಮಗಳ ಸುತ್ತಮುತ್ತ ಕನಿಷ್ಠ 1 ಕಿ.ಮೀನಿಂದ ಗರಿಷ್ಠ 23.06 ಕಿ.ಮೀ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಬೇಕಾಗಿದೆ. ಈ ವಲಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು, ವಸತಿ, ಶಾಲೆ, ಆಸ್ಪತ್ರೆ, ರಸ್ತೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಸಂರಕ್ಷಿತ ವಲಯದ ವ್ಯಾಪ್ತಿಯನ್ನು ಶಿಫಾರಸು ಮಾಡಲಾಗಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ಅನುಮತಿ ರದ್ದು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾದ 5 ಖಾಸಗಿ ಏಜೆನ್ಸಿಗಳು ನಿಗದಿತ ಅವಧಿಯಲಿ ಘಟಕಗಳನ್ನು ಸ್ಥಾಪಿಸದೇ ವಿಳಂಬ ಮಾಡುತ್ತಿರುವುದರಿಂದ, ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಿರುವ ಸರ್ಕಾರದ ಆದೇಶಗಳನ್ನು ರದ್ದುಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇತರೆ ಪ್ರಮುಖ ತೀರ್ಮಾನಗಳೇನು?:
- ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2024ಕ್ಕೆ ಘಟನೋತ್ತರ ಅನುಮೋದನೆ
- ಕರ್ನಾಟಕ ಮುದ್ರಾಂಕ (ತಿದ್ದುಪಡಿ) ವಿಧೇಯಕ, 2024ಕ್ಕೆ ಘಟನೋತ್ತರ ಅನುಮೋದನೆ
- ಜಲ ಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಮೂಗೂರು ಮತ್ತು ಇತರ 49 ಜನವಸತಿಗಳಿಗೆ ರೂ. 100 ಕೋಟಿಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು DEOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
- ಜಲ ಜೀವನ್ ಮಿಷನ್ ಯೋಜನೆಯಡಿ ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಬಗ್ದಾಲ್ ಮತ್ತು ಇತರ 104 ಜನವಸತಿಗಳಿಗೆ ಮತ್ತು ಚಿಟಗುಪ್ಪೆ ತಾಲೂಕಿನ ಮನಾ-ಎ-ಖೇಳಿ ಮತ್ತು ಇತರೆ 32 ಜನವಸತಿಗಳಿಗೆ ರೂ. 330 ಕೋಟಿಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು DEOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
- ಕರ್ನಾಟಕ ಸಾಮಾನ್ಯ ಸೇವೆಗಳು (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ಕ್ಕೆ ಅನುಮೋದನೆ
- 15ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ವಿಸ್ತರಿಸಲು ಅನುಮೋದನೆ
- ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಧಿಗಳ ವರ್ಗಾವಣೆಗೆ ಸಂಬಂಧಿಸಿದಂತೆ 5ನೇ ರಾಜ್ಯ ಹಣಕಾಸು ಆಯೋಗವು ಮಾಡಿರುವ ಶಿಫಾರಸುಗಳ ಸ್ವೀಕಾರ
- ವನ್ಯಜೀವಿಧಾಮಗಳು, ರಾಷ್ಟ್ರೀಯ ಉದ್ಯಾನವನಗಳು, ಹುಲಿ ಸಂರಕ್ಷಿತ ಪ್ರದೇಶಗಳು, ಮೀಸಲು ಮತ್ತು ರಕ್ಷಿತ ಅರಣ್ಯ ಪ್ರದೇಶಗಳ ಮಧ್ಯದಲ್ಲಿರುವ ಅಂಚಿನಲ್ಲಿರುವ ಮತ್ತು ವನ್ಯಜೀವಿ ಕಾರಿಡಾರ್‌ಗಳಲ್ಲಿನ ಖಾಸಗಿ ಜಮೀನುಗಳನ್ನು ರೈತರ ಸ್ವ-ಇಚ್ಛೆಗೆ ಅನುಗುಣವಾಗಿ ಅರಣ್ಯ ಇಲಾಖೆಯ ಸುಪರ್ದಿಗೆ ಪಡೆದುಕೊಳ್ಳುವ ಕುರಿತು ಮಾರ್ಗಸೂಚಿಗಳನ್ನು ಅನುಮೋದಿಸಲು ಒಪ್ಪಿಗೆ
- ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 77 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನೆಡತ್ತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೆ ಒಪ್ಪಿಗೆ
- ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳು (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು, 2024"ಕ್ಕೆ ಅನುಮೋದನೆ
- ಜಲ ಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಉಂಡವಾಡಿ ಮತ್ತು ಇತರೆ 67 ಜನವಸತಿಗಳಿಗೆ ರೂ. 121.30 ಕೋಟಿಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು DEOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
- ಜಲ ಜೀವನ್ ಮಿಷನ್ ಯೋಜನೆಯಡಿ ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಕಮಲಾಪುರ ತಾಲ್ಲೂಕುಗಳಲ್ಲಿನ ವಿ.ಕೆ. ಸಲಗಾರ್ ಮತ್ತು ಇತರ 16 ಗ್ರಾಮಗಳಿಗೆ (23 ಜನವಸತಿಗಳು) 71.50 ಕೋಟಿಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
- ಜಲ ಜೀವನ್ ಮಿಷನ್ ಯೋಜನೆಯಡಿ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಆಲೂರ್ ಮತ್ತು ಇತರೆ 58 ಗ್ರಾಮಗಳು (66 ಜನವಸತಿಗಳು) ಮತ್ತು ಜೇವರ್ಗಿ ತಾಲ್ಲೂಕಿನ 22 ಗ್ರಾಮಗಳಿಗೆ (33 ಜನವಸತಿಗಳು) ರೂ. 265.00 ಕೋಟಿಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
- ಜಲ ಜೀವನ್ ಮಿಷನ್ ಯೋಜನೆಯಡಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಬೈರನಪಾದ ಹಾಗೂ ಇತರೆ 28 ಗ್ರಾಮಗಳು ಹಾಗೂ ರಟ್ಟಿಹಳ್ಳಿ ತಾಲೂಕಿನ 27 ಗ್ರಾಮಗಳಿಗೆ 100 ಕೋಟಿಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪುನಶ್ಚೇತನ ಕಾಮಗಾರಿಯನ್ನು DBOT ಆಧಾರದ ಮೇಲೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
- ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸೇರಿದ 136 ಮೆಟ್ರಿಕ್ ಪೂರ್ವ ಮತ್ತು 134 ಮೆಟ್ರಿಕ್ ನಂತರದ ಹಾಗೂ 119 ವಾಲ್ಮೀಕಿ ಆಶ್ರಮ ಶಾಲೆಗಳಿಗೆ ರೂ. 69.13 ಕೋಟಿಗಳ ಅಂದಾಜು ಮೊತ್ತದಲ್ಲಿ ಆಹಾರ ಪದಾರ್ಥ ಮತ್ತು ಇತರೆ ಸಾಮಾಗ್ರಿಗಳನ್ನು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಆಹ್ವಾನಿಸಿ ಖರೀದಿಸಲು ಸಮ್ಮತಿ
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಯಶಸ್ವಿ, ಪ್ರತಿ ತಿಂಗಳು 1.18 ಕೋಟಿ ಫಲಾನುಭವಿಗಳಿಗೆ ಹಣ ಬಿಡುಗಡೆ:ಸಚಿವೆ ಹೆಬ್ಬಾಳ್ಕರ್