ಬೆಂಗಳೂರು: ಸದ್ಯದಲ್ಲೇ ಘೋಷಣೆಯಾಗಲಿರುವ ಮೂರು ವಿಧಾನಸಭೆ, ಒಂದು ವಿಧಾನ ಪರಿಷತ್ ಉಪಚುನಾವಣೆಗೆ ಸಿದ್ಧತಾ ಕಾರ್ಯ ಆರಂಭಿಸಿರುವ ಬಿಜೆಪಿ ಉಪಚುನಾವಣೆಗೆ ಉಸ್ತುವಾರಿಗಳ ನೇಮಕ ಮಾಡುವ ಮೂಲಕ ಕ್ಷೇತ್ರಗಳ ಗೆಲ್ಲುವ ಕಾರ್ಯತಂತ್ರಕ್ಕೆ ಮುಂದಾಗಿದೆ. ಬೈ ಎಲೆಕ್ಷನ್ ಕ್ಲೀನ್ ಸ್ವೀಪ್ ಗೆ ತಂತ್ರಗಾರಿಕೆ ಆರಂಭಿಸಿದೆ.
ಬಿಜೆಪಿ, ಜೆಡಿಎಸ್, ಕಾಂಗ್ರೆಸ್ನ ತಲಾ ಒಬ್ಬರು ಶಾಸಕರು ಸಂಸದರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮತ್ತು ಪರಿಷತ್ ಸದಸ್ಯರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಸೇರಿ ಮೂರು ವಿಧಾನಸಭಾ ಕ್ಷೇತ್ರ ಒಂದು ಪರಿಷತ್ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.
ಸಧ್ಯದಲ್ಲೇ ದಿನಾಂಕವೂ ಘೋಷಣೆಯಾಗಲಿದೆ. ಚುನಾವಣೆ ಘೋಷಣೆಗೂ ಮುನ್ನವೇ ಚುನಾವಣಾ ತಯಾರಿ ಆರಂಭಕ್ಕೆ ಬಿಜೆಪಿ ಮುಂದಾಗಿದ್ದು, ಉಪ ಚುನಾವಣಾ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಿದೆ. ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಉಸ್ತುವಾರುಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಪ್ರಕಟಿಸಿದ್ದಾರೆ.
ಉಸ್ತುವಾರಿಗಳು:
- ದಕ್ಷಿಣ ಕನ್ನಡ (ಸ್ಥಳೀಯ ಸಂಸ್ಥೆ): ಬಸವರಾಜ್ ಬೊಮ್ಮಾಯಿ, ಕೋಟಾ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ, ಪ್ರೀತಮ್ ಗೌಡ.
- ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಆರ್ ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ತೆಂಗಿನಕಾಯಿ, ಪಿ ರಾಜೀವ್.
- ಸಂಡೂರು ವಿಧಾನಸಭಾ ಕ್ಷೇತ್ರ: ಗೋವಿಂದ ಕಾರಜೋಳ, ಸುನಿಲ್ ಕುಮಾರ್, ಎನ್ ರವಿಕುಮಾರ್, ಕೆ.ಎಸ್ ನವೀನ್.
- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ: ಸಿ.ಎನ್ ಅಶ್ವಥ್ ನಾರಾಯಣ್, ಎಂ ಕೃಷ್ಣಪ್ಪ, ಗೋಪಿನಾಥ್ ರೆಡ್ಡಿ, ನಂದೀಶ್ ರೆಡ್ಡಿ.
ಉಸ್ತುವಾರಿಗಳ ತಂಡವು ಕ್ಷೇತ್ರಕ್ಕೆ ತೆರಳಿ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹ ಮಾಡಲಿದ್ದು, ಎಲ್ಲ ಆಯಾಮಗಳು, ಅವಕಾಶಗಳ ಕುರಿತು ವರದಿ ತಯಾರಿಸಿ ರಾಜ್ಯ ಘಟಕಕ್ಕೆ ನೀಡಲಿದೆ. ರಾಜ್ಯ ಕೋರ್ ಕಮಿಟಿ ಸಭೆಯು ಈ ವರದಿಯನ್ನು ಅವಲೋಕಿಸಿ ಹೈಕಮಾಂಡ್ಗೆ ತನ್ನ ಅಭಿಪ್ರಾಯವನ್ನು ಸಲ್ಲಿಸಿ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸ್ಸು ಮಾಡಲಿದೆ.
ಚುನಾವಣೆ ನಡೆಯಲಿರುವ ನಾಲ್ಕು ಕ್ಷೇತ್ರಗಳಲ್ಲಿ ಒಂದು ಮಾತ್ರ ಕಾಂಗ್ರೆಸ್ ಕ್ಷೇತ್ರವಾಗಿದ್ದು ಮೂರು ಎನ್.ಡಿ.ಎ ಕ್ಷೇತ್ರಗಳಾಗಿವೆ. ಹಾಗಾಗಿ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಸವಾಲು ಬಿಜೆಪಿ ಮೇಲಿದ್ದು, ಲೋಕ ಸಮರದಲ್ಲಿನ ಫಲಿತಾಂಶವನ್ನು ಸಮರ್ಥಿಸಿಕೊಳ್ಳುವಂತೆ ಎಲ್ಲಾ ನಾಲ್ಕೂ ಕ್ಷೇತ್ರಗಳ ಗೆದ್ದು ಕ್ಲೀನ್ ಸ್ವೀಪ್ ಮಾಡಬೇಕು ಎನ್ನುವ ಕಾರ್ಯತಂತ್ರದೊಂದಿಗೆ ಬಿಜೆಪಿ ಅಖಾಡಕ್ಕೆ ದುಮುಕಿದೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರ, ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರ ಬಿಜೆಪಿಯದ್ದೇ ಆಗಿದ್ದು, ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಸಂಡೂರಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ಇದೆ. ಆದರೆ, ಚನ್ನಪಟ್ಟಣ ವಿಚಾರದಲ್ಲಿ ಮಾತ್ರ ಸ್ವಲ್ಪ ಗೊಂದಲವಿದ್ದು, ಬಿಜೆಪಿ ಅಭ್ಯರ್ಥಿಯೋ ಅಥವಾ ಜೆಡಿಎಸ್ ಅಭ್ಯರ್ಥಿಯೋ ಎನ್ನುವುದು ಇನ್ನು ಅಂತಿಮವಾಗಿಲ್ಲ. ಆದರೆ, ಜೆಡಿಎಸ್ ನಿರ್ಧಾರಕ್ಕೆ ಬಿಜೆಪಿ ಬೆಂಬಲ ನೀಡುವ ನಿರ್ಧಾರ ಪ್ರಕಟಿಸಿರುವ ಹಿನ್ನಲೆಯಲ್ಲಿ ದಳಪತಿಗಳ ನಿರ್ಧಾರದ ಮೇಲೆ ಇಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ. ಆದರೆ. ಎಲ್ಲಾ ನಾಲ್ಕು ಕ್ಷೇತ್ರಕ್ಕೂ ಬಿಜೆಪಿ ಜೆಡಿಎಸ್ ಮೈತ್ರಿ ಇರಲಿರುವ ಹಿನ್ನಲೆಯಲ್ಲಿ ಬಿಜೆಪಿ ಹೆಚ್ಚಿನ ಉತ್ಸಾಹದಲ್ಲಿ ಉಪ ಸಮರದ ರಣಾಂಗಳಕ್ಕೆ ದುಮುಕಿದೆ.
ಇದನ್ನೂ ಓದಿ: ಸಂಸದ ಕೆ.ಸುಧಾಕರ್ ಮದ್ಯ ಹಂಚಿರುವ ಬಗ್ಗೆ ಬಿಜೆಪಿ ಅಧ್ಯಕ್ಷ ನಡ್ಡಾ ಉತ್ತರಿಸಲಿ: ಡಿಕೆಶಿ - D K Shivakumar