ಬೆಳಗಾವಿ: ಹಾಲು ಉತ್ಪಾದಕರಿಗೆ ನೀಡಬೇಕಾದ 716 ಕೋಟಿ ರೂ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬೆಳಗಾವಿ ಡಿಸಿ ಕಚೇರಿ ಮುಂಭಾಗ ಎಮ್ಮೆಗಳನ್ನು ಕರೆ ತಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿಗೆ ಎಮ್ಮೆಗಳೊಂದಿಗೆ ಮೆರವಣಿಗೆಯ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ದ ಘೋಷಣೆಗಳನ್ನು ಕೂಗಿದರು. ಹಾಲಿನ ಕ್ಯಾನ್ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರದ್ದು ಮಾಡಿದೆ. ಸರ್ಕಾರದ ಧೋರಣೆಗಳಿಂದ ಜನರು ಮಾತ್ರವಲ್ಲ, ಜಾನುವಾರುಗಳೂ ಸಹ ಸಂಕಷ್ಟದಲ್ಲಿವೆ ಎಂದರು.
ಬಿಜೆಪಿ ಆಡಳಿತದಲ್ಲಿ 26 ಲಕ್ಷ ರೈತರಿಂದ ಪ್ರತಿದಿನ 80ರಿಂದ 85 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿತ್ತು. ಸಿಎಂ ಯಡಿಯೂರಪ್ಪನವರು ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಆದ್ದರಿಂದ ಹಾಲಿನ ಉತ್ಪಾದನೆಯ ಪ್ರಮಾಣ 10 ಲಕ್ಷ ಲೀಟರ್ ಕುಸಿದಿದೆ. ರೈತರಿಗೆ ಬರ ಪರಿಹಾರದ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆಯಿತು.
ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರ: ಮಾಧ್ಯಮಗಳ ಜೊತೆಗೆ ಮಾತನಾಡಿದ ಅನಿಲ ಬೆನಕೆ, "ಡಿ.ಕೆ.ಸುರೇಶ್ ಹೇಳಿಕೆಗೆ ಇಡೀ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದಂತೆ, ಅದನ್ನು ಮರೆಮಾಚಲು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರೈತರಿಗೆ ಅನ್ಯಾಯ ಎಸಗಿದೆ. ಕಿಸಾನ್ ಸಮ್ಮಾನ್ ಮೂಲಕ ನೀಡಲಾಗುತ್ತಿದ್ದ 4 ಸಾವಿರ ರೂ ಬಂದ್ ಮಾಡಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದಿಂದ 10 ವರ್ಷದ ಅವಧಿಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ರೂ ನೀಡಲಾಗಿತ್ತು. ಆದರೆ, ಮೋದಿ ಸರ್ಕಾರದಿಂದ ಈವರೆಗೆ 232 ಸಾವಿರ ಕೋಟಿ ರೂಪಾಯಿ ಬಂದಿದೆ. ಆದರೂ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕೇಂದ್ರದಿಂದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಬಹಳಷ್ಟು ರಸ್ತೆಗಳು ಅಭಿವೃದ್ಧಿ ಹೊಂದಿವೆ. ಹಾಗಾಗಿ, ಗ್ಯಾರಂಟಿಗಳು ಫೇಲ್ ಆಗಿದ್ದರಿಂದ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ" ಎಂದು ಆರೋಪಿಸಿದರು.
ಇದನ್ನೂ ಓದಿ: ಬರ ಪರಿಹಾರದ ಹಣ ಬಿಡುಗಡೆಗೆ ಆಗ್ರಹ: ಸಿಎಂ ಕಚೇರಿಗೆ ಬೀಗ ಹಾಕಲು ಮುಂದಾದ ಬಿಜೆಪಿ ನಾಯಕರು ವಶಕ್ಕೆ