ಬೆಂಗಳೂರು: ದೇಶ ಒಡೆಯುವ ಕೂಗೆಬ್ಬಿಸಿರುವ ಸಂಸದ ಡಿ.ಕೆ.ಸುರೇಶ್ ಅವರನ್ನು ಮೊದಲು ಕಾಂಗ್ರೆಸ್ ವಜಾಗೊಳಿಸಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಮೊದಲು ಅವರನ್ನು ಪಕ್ಷದಿಂದ ಹೊರಹಾಕಲಿ. ಕಾನೂನಾತ್ಮಕ ಕ್ರಮವನ್ನೂ ಜರುಗಿಸಬೇಕು. ಇವರದ್ದು ದೇಶ ದ್ರೋಹದ ಮನಸ್ಥಿತಿ. ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಬಣ್ಣಿಸಿದ ಕವಿ ಕುವೆಂಪುಗೆ ಮಾಡಿದ ಅವಮಾನ ಎಂದು ಖಂಡಿಸಿದ್ದಾರೆ.
ಅತಿರೇಕದ ಪರಮಾವಧಿ: ವಿದ್ರೋಹದ ಮನಸ್ಥಿತಿಯವರು ಮಾತ್ರ ದೇಶ ವಿಭಜನೆಯ ಮಾತನಾಡಲು ಸಾಧ್ಯ. ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿರುವುದು ಅತಿರೇಕದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸದ ಸ್ಥಾನದ ಜವಾಬ್ದಾರಿಯಲ್ಲಿರುವವರ ಬಾಯಿಂದಲೇ ಇಂಥ ಮಾತುಗಳು ಬಂದರೆ ಸಾಮಾನ್ಯರಿಗೆ ಏನು ಹೇಳಲಾದೀತು? ದಿನದಿಂದ ದಿನಕ್ಕೆ ನೈತಿಕವಾಗಿ ಕುಸಿಯುತ್ತಿರುವ ಕಾಂಗ್ರೆಸ್, ಅವಸಾನದ ಮನಸ್ಥಿತಿ ಅನುಭವಿಸುತ್ತಿರುವಂತಿದೆ. ಹತಾಶೆ, ನಿರಾಶೆಯಲ್ಲಿ ಡಿ.ಕೆ.ಸುರೇಶ್‌ರಂತಹ ಕಾಂಗ್ರೆಸ್ಸಿಗರಿಗೆ ದೇಶದಲ್ಲಿ ಅರಾಜಕತೆ ಉಂಟು ಮಾಡಬೇಕೆಂಬ ಮನಃಸ್ಥಿತಿ ಇದ್ದಂತಿದೆ. ಈ ಕಾರಣಕ್ಕಾಗಿಯೇ ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸಲು ಹೊರಟಿದ್ದಾರೆ. ರಾಹುಲ್ ಗಾಂಧಿ ಅವರದು ಭಾರತ್ ಜೋಡೋ ಯಾತ್ರೆಯಲ್ಲ, ಅದು ಭಾರತ್ ಒಡೆಯೋ ಯಾತ್ರೆ ಎಂಬುದನ್ನು ಡಿ.ಕೆ.ಸುರೇಶ್ ಅವರ ಮಾತುಗಳು ಸಾಕ್ಷೀಕರಿಸಿವೆ ಎಂದು ಟೀಕಿಸಿದ್ದಾರೆ.
ಸುರೇಶ್ ಹೇಳಿಕೆ ಅಕ್ಷಮ್ಯ: ಭಾರತ ಜೋಡೋ ಯಾತ್ರೆಯ ಮುಂಚೂಣಿಯಲ್ಲಿದ್ದ ಸಂಸದ ಡಿ.ಕೆ.ಸುರೇಶ್ ಅವರೇ ಭಾರತ ಥೋಡೋ ಕೆಲಸಕ್ಕೆ ಮುಂದಾಗಿದ್ದಾರೆ. ದೇಶದ ಅಖಂಡತೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಕಾಂಗ್ರೆಸ್ ನಾಯಕರು ತಲುಪಿರುವುದು ಅಕ್ಷಮ್ಯ ಅಪರಾಧ. ದಕ್ಷಿಣ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಮೂಡಿಸಬೇಕಾಗುತ್ತದೆ ಎಂಬ ದಾಷ್ಟ್ಯವನ್ನು ಸಹಿಸಲಾಗದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಮೈತ್ರಿ ಕೂಟದ ಭಾಗವಾಗಿದ್ದ ಡಿಎಂಕೆ ಸರ್ಕಾರದ ಸಚಿವರೊಬ್ಬರು ಈ ಹಿಂದೆ ಸನಾತನ ಧರ್ಮದ ವಿಚಾರದಲ್ಲಿ ದೇಶವನ್ನು ಒಡೆಯುವ ಮಾತನಾಡಿದ್ದರು. ಈಗ ಡಿ.ಕೆ.ಸುರೇಶ್ ಬಹಿರಂಗವಾಗಿ ದೇಶ ವಿಭಜನೆ ಮಾತಾಡಿದ್ದಾರೆ. ದೇಶಕ್ಕೆ ಕಾಂಗ್ರೆಸ್ನಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿತು ಎಂಬುದೊಂದು ಮಿಥ್ಯ ವಾದ ಎಂಬುದಕ್ಕೆ ಸುರೇಶ್ ಹೇಳಿಕೆ ಸಾಕ್ಷಿ ಎಂದು ಟ್ವೀಟ್ ಮೂಲಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಷ್ಟೊಂದು ಕಳಪೆ ಕೇಂದ್ರ ಬಜೆಟ್ನ್ನು ಯಾವತ್ತೂ ನೋಡಿಲ್ಲ, ರಾಜ್ಯಕ್ಕೂ ಅನ್ಯಾಯವಾಗಿದೆ: ಡಿ ಕೆ ಶಿವಕುಮಾರ್
ದಕ್ಷಿಣ ಭಾರತಕ್ಕೆ ಪ್ರತಿ ಹಂತದಲ್ಲೂ ಅನ್ಯಾಯ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಖಂಡಿಸದಿದ್ದರೆ, ಪ್ರತ್ಯೇಕ ರಾಷ್ಟ್ರಕ್ಕೂ ಕೂಡ ಬೇಡಿಕೆ ಇಡಬೇಕಾದ ಅನಿವಾರ್ಯ ಪರಿಸ್ಥಿತಿಯು ನಮ್ಮ ಮೇಲೆ ಹೇರಿಕೆಯಾಗುತ್ತಿದೆ ಎಂದು ಗುರುವಾರ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಿದ ಬಳಿಕ ಸಂಸದ ಡಿ ಕೆ ಸುರೇಶ್ ಹೇಳಿದ್ದರು.