ಬೆಂಗಳೂರು: ಸರ್ಕಾರದ ಹಾಗೂ ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಅವರ ಪರವಾಗಿ ಪ್ರಚಾರ ಮಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು ನೀಡಿದೆ.
ನಗರದ ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಇಂದು ಭೇಟಿ ನೀಡಿದ ಬಿಜೆಪಿ ನಿಯೋಗವು, ಡಿ ಕೆ ಶಿವಕುಮಾರ್ ಅವರ ವಿರುದ್ಧ ದೂರು ನೀಡಿತು. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ರಾಜ್ಯ ವಕ್ತಾರರಾದ ಎಚ್.ಎನ್. ಚಂದ್ರಶೇಖರ್, ಹೆಚ್. ವೆಂಕಟೇಶ್ ದೊಡ್ಡೇರಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ದೂರು ಸಲ್ಲಿಸಿದರು.
ಡಿ ಕೆ ಶಿವಕುಮಾರ್ ಅವರು ತಮ್ಮ ಅಧಿಕೃತ ಫೇಸ್‍ಬುಕ್ ಪೇಜಿನಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆ, ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸಿಕೊಂಡು ಡಿ ಕೆ ಸುರೇಶ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾಗಿ ದೂರಲಾಗಿದೆ.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಮೀಷನರ್ ಹೇಮಂತ್ ನಿಂಬಾಳ್ಕರ್ ಅವರನ್ನು ಆ ಹುದ್ದೆಯಿಂದ ವರ್ಗಾವಣೆ ಮಾಡಲು ಕೋರಲಾಗಿದೆ. ತಕ್ಷಣ ಅವರನ್ನು ಅಲ್ಲಿಂದ ವರ್ಗಾವಣೆ ಮಾಡುವಂತೆ ಚುನಾವಣಾ ಕಮೀಷನರ್ ಅವರಿಗೆ ಮನವಿ ಮಾಡಿದ್ದೇವೆ. ರಾಜ್ಯದ ಒಳಗಡೆ ಇದ್ದರೆ ಮತ್ತೆ ಪ್ರಭಾವ ಬಳಸುವ ಸಾಧ್ಯತೆ ಇದ್ದು, ಅವರಿಗೆ ಕರ್ನಾಟಕದಿಂದ ಹೊರಗಡೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ವಿನಂತಿಸಿದ್ದಾಗಿ ವಿವರಿಸಿದರು.
ಚುನಾವಣಾ ವೇಳಾಪಟ್ಟಿ ನಾಳೆಯಿಂದ (ಮಾ.28) ಆರಂಭವಾಗಲಿದ್ದು, ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಕಮೀಷನರ್ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಕೆಲವು ಸಚಿವರು ತಮ್ಮ ಅಧಿಕೃತ ಕಚೇರಿಗಳನ್ನು ಲೋಕಸಭಾ ಚುನಾವಣಾ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ಸಂಬಂಧ ಇನ್ನೊಂದು ದೂರಿನಲ್ಲಿ ಗಮನ ಸೆಳೆಯಲಾಗಿದೆ. ಬಿಜೆಪಿ ಚುನಾವಣಾ ಬೋನಸ್ ಕುರಿತಂತೆ ವಾಟ್ಸಪ್ ನಕಲಿ ಸಂದೇಶದ ಕುರಿತು ಮತ್ತೊಂದು ದೂರು ಕೊಡಲಾಗಿದ್ದು, ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ವಿವರ ನೀಡಿದರು.
ಇದನ್ನೂ ಓದಿ: ಪ್ರಚೋದನಾಕಾರಿ ಹೇಳಿಕೆ ಆರೋಪ: ಸಚಿವ ಶಿವರಾಜ್ ತಂಗಡಗಿ ವಿರುದ್ಧ ದೂರು ದಾಖಲು - COMPLAINT AGAINST THANGADAGI