ಬೆಳಗಾವಿ: ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ. ಕುಂದಾನಗರಿ ಬೆಳಗಾವಿ ಜನರು ಈ ಬಜೆಟ್ ಬಗ್ಗೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಹಾಗೂ ನ್ಯಾಯವಾದಿ ಎನ್.ಆರ್. ಲಾತೂರ್ ಅವರು 'ಈಟಿವಿ ಭಾರತ' ಜೊತೆಗೆ ಅಭಿಪ್ರಾಯ ಹಂಚಿಕೊಂಡಿದ್ದು, ಹಿಂದೆ ಘೋಷಣೆಯಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ಗೆ ದಿನಗಣನೆ ಶುರುವಾಗಿದೆ. ಪ್ರತಿ ಬಾರಿ ಸರ್ಕಾರಗಳು ಮಂಡಿಸುವ ಬಜೆಟ್ ಮೇಲೆ ಬೆಳಗಾವಿ ಜಿಲ್ಲೆ ಜನರು ತುಂಬಾ ನಿರೀಕ್ಷೆ ಇಟ್ಟುಕೊಳ್ಳುವುದಷ್ಟೇ ಆಗುತ್ತಿದೆ. ಆದರೆ, ಪ್ರಮುಖ ಘೋಷಣೆಗಳು ಕೇವಲ ಘೋಷಣೆ ಆಗಿಯೇ ಉಳಿದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ''ಈ ಹಿಂದೆ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಹೆರಿಟೇಜ್ ಪಾರ್ಕ್, ಗ್ಲಾಸ್ ಹೌಸ್ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರು. ಅನೇಕ ಸರ್ಕಾರಗಳು ಬಂದು ಹೋದ್ರೂ ರಿಂಗ್ ರೋಡ್ ಹಾಗೇ ಉಳಿದಿದೆ. ಅಲ್ಲದೇ ರಮೇಶ ಜಾರಕಿಹೊಳಿ ನೀರಾವರಿ ಮಂತ್ರಿ ಆಗಿದ್ದಾಗ 11 ಏತ ನೀರಾವರಿ ಯೋಜನೆಗಳನ್ನು ತಂದಿದ್ದರೂ ಅವು ನೆನೆಗುದಿಗೆ ಬಿದ್ದಿವೆ. ಇನ್ನು ಉದ್ಘಾಟನೆಗೆ ಸಿದ್ಧವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳು ಹಾಗೂ ಸಿಬ್ಬಂದಿ ನೇಮಕಾತಿಗೆ ಹಣಕಾಸಿನ ಅವಶ್ಯಕತೆಯಿದೆ. ಹಾಗಾಗಿ, ಜಿಲ್ಲೆಯ ರಾಜಕಾರಣಿಗಳು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಈ ಬಜೆಟ್ನಲ್ಲಿ ಈ ಎಲ್ಲ ಯೋಜನೆಗಳಿಗೆ ಅನುದಾನ ಕಲ್ಪಿಸುವ ಕೆಲಸ ಮಾಡಬೇಕು'' ಎಂದು ಆಗ್ರಹಿಸಿದರು.
''ಮಹದಾಯಿ ಯೋಜನೆಗೆ ಪ್ರತಿ ಬಜೆಟ್ನಲ್ಲಿ ಕೇವಲ ಅನುದಾನ ಮೀಸಲು ಇಡುವುದಷ್ಟೇ ಆಗಿದೆ. ಆದರೆ, ಕೆಲಸ ಮಾತ್ರ ಒಂದು ಪರ್ಸೆಂಟ್ ನಷ್ಟು ಆಗಿಲ್ಲ. ಯೋಜನೆ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ರಾಜ್ಯ ಮತ್ತು ಕೇಂದ್ರ ಎರಡಲ್ಲೂ ಬಿಜೆಪಿ ಅಧಿಕಾರದಲ್ಲಿದ್ದರೂ ವನ್ಯಜೀವಿ ಪರಿಸರ ಇಲಾಖೆ ಒಪ್ಪಿಗೆ ಪಡೆಯಲು ಇವರಿಗೆ ಸಾಧ್ಯವಾಗಲಿಲ್ಲ. ಅದೇ ರೀತಿ ಹುಲಿ ಪ್ರಾಧಿಕಾರವೂ ವಿರೋಧ ವ್ಯಕ್ತಪಡಿಸಿದೆ. ಇಂತಹ ಸಂದರ್ಭದಲ್ಲಿ ಗೋವಾ ಸರ್ಕಾರಕ್ಕೆ ಮನವರಿಕೆಯನ್ನೂ ಮಾಡಲಿಲ್ಲ'' ಎಂದು ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯವಾದಿ ಎನ್.ಆರ್. ಲಾತೂರ್ ಪ್ರತಿಕ್ರಿಯಿಸಿ, ''ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಸಂಚಾರಿ ಪೀಠಕ್ಕಾಗಿ ತಕ್ಷಣವೇ ಕಟ್ಟಡವನ್ನು ಆಯ್ಕೆ ಮಾಡಬೇಕು. ಹೆಚ್ಚುವರಿ ಗ್ರಾಹಕರ ಆಯೋಗವನ್ನು ಕಾಯಂಗೊಳಿಸಿ ಪ್ರತ್ಯೇಕ ನ್ಯಾಯಾಲಯ ಕೊಠಡಿ, ಸಿಬ್ಬಂದಿ, ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲದೇ ಕೆಪಿಐಡಿ ನ್ಯಾಯಾಲಯವನ್ನೂ ಜಿಲ್ಲೆಗೆ ನೀಡಬೇಕು'' ಎಂದು ಆಗ್ರಹಿಸಿದರು.
ನರೇಗಾ ಅನುದಾನ ಕಡಿಮೆ ಮಾಡಬೇಡಿ: ''ಜಿಲ್ಲೆಯ ನರೇಗಾ ಕಾರ್ಮಿಕ ವರ್ಗಕ್ಕೆ ಅನುದಾನವನ್ನು ಪ್ರತಿವರ್ಷ ಬಜೆಟ್ನಲ್ಲಿ ಹೆಚ್ಚಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಕೆಲಸಗಾರರಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಬೊಮ್ಮಾಯಿ ಸರ್ಕಾರ ಕಳೆದ ವರ್ಷದ ಬಜೆಟ್ನಲ್ಲಿ ನರೇಗಾ ಯೋಜನೆಯಲ್ಲಿ 10 ಸಾವಿರ ಕೋಟಿ ಅನುದಾನ ಕಡಿಮೆ ಮಾಡಿತ್ತು. ಇದರಿಂದ ಕಾರ್ಮಿಕರ ವೇತನ ಪಾವತಿಗೆ ಸಾಕಷ್ಟು ಸಮಸ್ಯೆ ಆಗಿತ್ತು. ಮೊದಲೇ ಬರಗಾಲದ ವೇಳೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೈ ಹಿಡಿದಿದ್ದೆ ನರೇಗಾ ಯೋಜನೆ. ಹಾಗಾಗಿ, ನರೇಗಾ ಅನುದಾನ ಕಡಿಮೆ ಮಾಡಬಾರದು'' ಎಂದು ಎನ್.ಆರ್. ಲಾತೂರ್ ಆಗ್ರಹಿಸಿದರು.
ಸುವರ್ಣ ಸೌಧಕ್ಕೆ ಶಕ್ತಿ ತುಂಬಿ: ''ಐದನೂರು ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿದ ಸುವರ್ಣ ವಿಧಾನಸೌಧ ಕೇವಲ ಅಧಿವೇಶನಕ್ಕೆ ಮಾತ್ರ ಸೀಮಿತವಾಗಿದೆ. ಸೌಧಕ್ಕೆ ಶಕ್ತಿ ತುಂಬುವ ಕೆಲಸ ಯಾವ ಸರ್ಕಾರವೂ ಮಾಡಿಲ್ಲ. ಸದ್ಯ ಮಾಹಿತಿ ಹಕ್ಕು ಆಯುಕ್ತರ ಕಚೇರಿ ಮತ್ತು ಇತ್ತೀಚೆಗೆ ಮಂಜೂರಾದ ರಾಷ್ಟ್ರೀಯ ಹೆದ್ದಾರಿಗಳ ಕಚೇರಿಯ ವಲಯ ವಿಭಾಗ ಬಿಟ್ಟರೆ ಇನ್ನಾವುದೇ ರಾಜ್ಯ ಮಟ್ಟದ ಕಚೇರಿಗಳು ಇಲ್ಲಿ ಕಾರ್ಯಾರಂಭ ಆಗಿಲ್ಲ. ಹಾಗಾಗಿ, ಈ ಬಜೆಟ್ ನಲ್ಲಾದರೂ ಸಿಎಂ ಸಿದ್ದರಾಮಯ್ಯ ಕಚೇರಿ ಸ್ಥಳಾಂತರ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಂದಾಗ ಮಾತ್ರ ಸೌಧ ನಿರ್ಮಿಸಿದ್ದು ಸಾರ್ಥಕ ಆಗುತ್ತೆ'' ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಈ ಬಾರಿ ಬಜೆಟ್ ತಯಾರಿ ಮಧ್ಯೆ ಎದುರಾಗಿರುವ ಸವಾಲುಗಳೇನು?