ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಕೇರಳದ ವಯನಾಡ್ನಲ್ಲಿ ಮಳೆ ಪ್ರವಾಹ, ಭೂಕುಸಿತದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ನೆರವು ಮತ್ತು ದಿನಸಿ ಸಾಮಾಗ್ರಿ ತಲುಪಿಸುವ 2 ಟ್ರಕ್‌ಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ವಯನಾಡ್ ದುರಂತದಿಂದ ಸಾಕಷ್ಟು ನಷ್ಟವುಂಟಾಗಿದೆ. ಎಲ್ಲೆಡೆಯಿಂದ ಸ್ಪಂದಿಸಿ ನೆರವು ನೀಡುತ್ತಿರುವುದು ಸಮಾಧಾನಕಾರ. ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಎದುರಾದಾಗ ಬಿಬಿಎಂಪಿ ನೌಕರರ ಸಂಘ ಸಹಾಯ, ಸಹಕಾರ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ 2 ಟ್ರಕ್‌ಗಳಲ್ಲಿ 25 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳುಹಿಸಲಾಗುತ್ತಿದೆ" ಎಂದು ಹೇಳಿದರು.
ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, "ವಯನಾಡ್ ದುರಂತದಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಿದಾಗ ಬಂದ ಸಂಕಷ್ಟಗಳಿಗೆ ಸುಲಭ ಪರಿಹಾರ ನೀಡಬಹುದಾಗಿದೆ. ಬಿಬಿಎಂಪಿ ನೌಕರರ ಸಂಘವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ನಮ್ಮ ಸಂಘಟನೆ ಈ ಹಿಂದೆ ಉತ್ತರ ಕರ್ನಾಟಕ ಮತ್ತು ಕೊಡಗಿನಲ್ಲಿ ಮಳೆ ಪ್ರವಾಹದಿಂದ ಸಂಕಷ್ಟದಲ್ಲಿ ಸಿಲುಕಿದ್ದ ಜನರಿಗೆ ದಿನಸಿ ಸಾಮಾಗ್ರಿ ನೀಡಿತ್ತು. ಧರ್ಮಸ್ಥಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ 1 ಲಕ್ಷ ಲೀಟರ್ ಕುಡಿಯುವ ನೀರನ್ನು ಪೂರೈಸಿತ್ತು" ಎಂದರು.
"ರವೆ, ಎಣ್ಣಿ, ಅಕ್ಕಿ, ಗೋದಿ, ಸಕ್ಕರೆ ಹಾಗೂ ದಿನ ನಿತ್ಯ ಬಳಕೆಯ ವಸ್ತುಗಳಾದ ಹಾಸಿಗೆ, ದಿಂಬು, ಬೆಡ್ ಶಿಟ್, ಸ್ವೆಟರ್, ಜರ್ಕಿನ್ ಸೇರಿದಂತೆ ಸುಮಾರು 11 ಟನ್ ಸಾಮಗ್ರಿ ನೀಡಲಾಗಿದೆ. ದಿನಸಿ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳ ಟ್ರಕ್‌ಗಳ ಜೊತೆಗೆ 20ಕ್ಕೂ ಹೆಚ್ಚು ಅಧಿಕಾರಿಗಳು, ನೌಕರರು ವಯನಾಡ್‌ಗೆ ತೆರಳಿದ್ದು, ಸಂತ್ರಸ್ತರಿಗೆ ಸಾಮಗ್ರಿ ಹಸ್ತಾಂತರಿಸಿ ಹಿಂತಿರುಗಲಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.
ಕ್ಷೇಮಾಭಿವೃದ್ಧಿ ಸಂಘದ ಮತ್ತು ಸಹಕಾರ ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಕೆ.ಜಿ.ರವಿ, ಡಾ.ಶೋಭಾ, ಹೆಚ್.ಕೆ.ಹರೀಶ್, ಸೋಮಶೇಖರ್, ಆರ್.ರೇಣುಕಾಂಬ, ಕೆ. ಮಂಜೇಗೌಡ, ಎನ್.ಶ್ರೀಧರ್, ಸಂತೋಷ್ ಕುಮಾರ್, ಎನ್.ಮಂಜುನಾಥ್, ಕೆ.ನರಸಿಂಹ, ಕೆ.ಸಂತೋಷ್ ಕುಮಾರ್ ನಾಯ್ಕ, ಸಿ.ಎಂ.ಮುನಿರಾಜು, ಎಂ.ಮಹೇಶ್, ಎಲ್.ಆರ್.ಮಂಜುನಾಥ್, ಎನ್.ಹರೀಶ್ ಕುಮಾರ್, ವಿನಯಕುಮಾರ್, ರಾಜಶೇಖರ್, ಮಂಜುನಾಥ್, ಆರ್.ಪಿ.ವಾಣಿ ಉಪಸ್ಥಿತರಿದ್ದರು.