ಹುಬ್ಬಳ್ಳಿ: "ಲಕ್ಷ್ಮಣ ಸವದಿ ಮರಳಿ ಬಿಜೆಪಿಗೆ ಬರುವುದಿಲ್ಲ ಎಂದು ಅವರೇ ಹೇಳಿದ್ದಾರೆ. ಆದರೆ ಮೋದಿ ಅವರ ಕೆಲಸವನ್ನು ಮೆಚ್ಚಿ, ದೇಶ ಕಟ್ಟುವ ಹಾಗೂ ಅಭಿವೃದ್ಧಿಯ ಅಜೆಂಡಾಗಾಗಿ ಒರಿಜಿನಲ್ ಕಾಂಗ್ರೆಸ್ನಲ್ಲಿದ್ದ ಬಹಳಷ್ಟು ಮಂದಿ ಬಿಜೆಪಿಗೆ ಬರುವುದು ಸತ್ಯ. ಈಗ ಅವರ ಹೆಸರು ಹೇಳುವುದರಿಂದ ಪ್ರಕ್ರಿಯೆಗೆ ತೊಂದರೆಯಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಹಾಗೂ ಜನಾರ್ದನ ರೆಡ್ಡಿ ಮರಳಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿ ಸೇರ್ಪಡೆಗೆ ಮುನ್ನ ಕರಾರು ಇಟ್ಟಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಕರಾರುಗಳು ಜಗದೀಶ್ ಶೆಟ್ಟರ್ ಮತ್ತು ಅಮಿತ್ ಶಾ ಅವರ ನಡುವೆ ಆಗಿದೆ. ಇದು ಮೇಲಿನವರಿಗೆ ಬಿಟ್ಟಿದ್ದು. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾಗುವಾಗ ಗೈರಾಗಿದ್ದು ನನಗೆ ಗೊತ್ತಿದೆ. ಆದರೆ ಶೆಟ್ಟರ್ ಹಾಗೂ ಅಮಿತಾ ಶಾ ಅವರ ನಡುವೆ ಏನು ಮಾತುಕತೆ ಆಗಿದೆ ಎನ್ನುವುದು ನನಗೆ ತಿಳಿದಿಲ್ಲ" ಎಂದು ಹೇಳಿದರು.
ಸ್ಥಳೀಯವಾಗಿ ಅಸಮಾಧಾನದ ಕುರಿತು ಮಾತನಾಡಲು ನಿರಾಕರಿಸಿದ ಬೊಮ್ಮಾಯಿ, ನಾನು ನಿನ್ನೆ ಬಂದಿದ್ದೇನೆ. ಉಳಿದವರ ಬಗ್ಗೆ ಏನೂ ಗೊತ್ತಿಲ್ಲ ಎಂದರು.
I.N.D.I.A ಒಕ್ಕೂಟದಲ್ಲಿ ಬಿರುಕು: "ಇದು ಮೊದಲಿನಿಂದಲೂ ಗೊತ್ತಿರುವ ವಿಚಾರ. ಹಲವಾರು ರಾಜ್ಯಗಳಲ್ಲಿ ಒಬ್ಬರನ್ನು ಒಬ್ಬರು ವಿರೋಧ ಮಾಡಿಕೊಂಡು ಬಂದಿದ್ದಾರೆ. ವಿರೋಧಾಭಾಸ ಇರುವ ಪಕ್ಷಗಳನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಮೋದಿ ವಿರುದ್ಧ ಹೋರಾಡಲು ಅವರು ಈ ಪ್ರಯತ್ನ ಮಾಡಿದ್ದಾರೆ. ತಮ್ಮ ಅಸ್ತಿತ್ವಕ್ಕೆ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿವೆ. ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಳವಾಗಿದೆ. ಈಗಾಗಲೇ ಸಾಕಷ್ಟು ಕಚ್ಚಾಟ ಆರಂಭವಾಗಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆದ ತಕ್ಷಣ ಕಾಂಗ್ರೆಸ್ ಇಬ್ಭಾಗ ಆಗುತ್ತದೆ" ಎಂದರು.
ಇದೇ ವೇಳೆ ಗಣರಾಜ್ಯೋತ್ಸವಕ್ಕೆ ಹಾರ್ದಿಕ ಶುಭಾಶಯ ಕೋರಿದ ಅವರು, "ಕನ್ನಡ ನಾಡಿನ ಜನತೆಗೆ ಗಣರಾಜ್ಯೋತ್ಸವ ಶುಭಾಶಯ ಹೇಳಿದರು. ನಮ್ಮ ಭಾರತದ ಗಣರಾಜ್ಯ ವಿಶೇಷವಾಗಿ ಕೂಡಿದ್ದು, ಬ್ರಿಟಿಷರ ಮೊದಲ ಪಾರ್ಲಿಮೆಂಟ್ಗಿಂತಲೂ ಉತ್ಕೃಷ್ಟವಾಗಿದೆ. ಎಲ್ಲಾ ದೇಶಗಳ ಸಂವಿಧಾನದ ಅಧ್ಯಯನ ಮಾಡಿ ರೂಪುಗೊಂಡಿರುವ ಸಂವಿಧಾನ ಕಾಲ ಕಾಲಕ್ಕೂ ಸ್ಪಂದನಾಶೀಲವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಗಣರಾಜ್ಯೋತ್ಸವ: ಮಾಣಿಕ್ ಶಾ ಪರೇಡ್ ಮೈದಾನದ ಸುತ್ತ ಪೊಲೀಸ್ ಭದ್ರತೆ