ಬೆಳಗಾವಿ: "ಪಂಚಮಸಾಲಿ ಹೋರಾಟದ ಮೇಲೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ, ಅದನ್ನು ತೆರವುಗೊಳಿಸಿದೆ. ಯಾರೂ ಭಯಭೀತರಾಗದೇ ಶಾಂತಿಯುತವಾಗಿ ಹೋರಾಟದಲ್ಲಿ ಭಾಗವಹಿಸಿ" ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.
ನಾಳೆ (ಮಂಗಳವಾರ) ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದರ ಪೂರ್ವಭಾವಿ ಸಿದ್ಧತೆಗಾಗಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, "ನಾಳಿನ ಸಮಾವೇಶಕ್ಕೆ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಯಾರೂ ಹಿಂಜರಿಯದೆ ಹೊಸ ಉತ್ಸಾಹದೊಂದಿಗೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು" ಮನವಿ ಮಾಡಿದರು.
"ನಾಳಿನ ಹೋರಾಟದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಮಾಜಕ್ಕೆ ಮೀಸಲಾತಿ ಪತ್ರ ಹಸ್ತಾಂತರ ಮಾಡಿದರೆ ಅವರಿಗೆ ಹೈದರಾಬಾದ್ನಿಂದ ತಂದಿರುವ ಮುತ್ತಿನ ಹಾರ ಹಾಕಿ ಧನ್ಯವಾದಗಳನ್ನು ತಿಳಿಸುತ್ತೇವೆ. ಇಲ್ಲವಾದರೆ ಹರ ಹರ ಮಹಾದೇವ ಎಂದು ಶಾಂತಿಯುತವಾಗಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ" ಎಂದು ಎಚ್ಚರಿಕೆ ನೀಡಿದರು.
"ಪಂಚಮಸಾಲಿ ಹೋರಾಟದ ಟ್ರ್ಯಾಕ್ಟರ್ ರ್‍ಯಾಲಿಗೆ ಜಿಲ್ಲಾಡಳಿತ ಒಪ್ಪಿಗೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ನಾವೇ ನಗರದ ಒಳಗೆ ತರಬೇಡಿ ಎಂದು ಸೂಚಿಸಿದ್ದೇವೆ. ಅದಕ್ಕಾಗಿ ಹೋರಾಟದ ವೇದಿಕೆಯಲ್ಲಿನ ಪೂರಕ ಬೆಳವಣಿಗೆ ನಡೆದರೆ ಮರಳುತ್ತಾರೆ. ಇಲ್ಲವಾದರೆ ಅವರೂ ಸಹ ನಗರದ ಒಳಗೆ ನುಗ್ಗಿ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ" ಎಂದು ತಿಳಿಸಿದರು.
"ನಮ್ಮ ಶಾಂತಿಯುತ ಹೋರಾಟಕ್ಕೆ ಈ ಸರ್ಕಾರ ಕೊಟ್ಟ ತೊಂದರೆಯಷ್ಟು ಬೇರೆ ಯಾವುದೇ ಸರ್ಕಾರ ನೀಡಿಲ್ಲ. ಈ ಹೋರಾಟದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜೊತೆಯಾಗಿ ಎಲ್ಲ ಪಕ್ಷಗಳ ಹಾಲಿ, ಮಾಜಿ ಶಾಸಕರು, ಸಚಿವರು ಭಾಗಿಯಾಗಿ ಬೆಂಬಲ ನೀಡಬೇಕು. ಒಂದು ವೇಳೆ ಹೋರಾಟದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ ಅಂತವರಿಗೆ ಸಮಾಜದ ಜನರೇ ಉತ್ತರ ನೀಡುತ್ತಾರೆ" ಎಂದರು.
"ಪ್ರತಿಯೊಬ್ಬರ ಮೇಲೂ ಸಮಾಜದ ಋಣವಿದೆ. ಅದನ್ನು ತೀರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ವಕೀಲರು, ಜನಪ್ರತಿನಿಧಿಗಳು, ರೈತರು ಹೀಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ ಹಕ್ಕಿಗಾಗಿ ಒತ್ತಾಯ ಮಾಡಲಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ನಾಳೆ ತಿಳಿಸುವೆ: ಸಿಎಂ ಸಿದ್ದರಾಮಯ್ಯ