ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಪ್ರಚಾರಕ್ಕೆ ಬರುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನನ್ನ ಕನಸು ಎಂದು ಬಾಗಲಕೋಟೆ ಕ್ಷೇತ್ರದಿಂದ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ನಿಮ್ಮ ಚುನಾವಣಾ ಪ್ರಚಾರ ಹೇಗಿದೆ?: ಭರ್ಜರಿಯಾಗಿ ನಡೆಯುತ್ತಿದೆ. ಜಿಲ್ಲಾ ಪಂಚಾಯಿತಿ ಮಟ್ಟದ ಸಭೆಯಿಂದ ಹಿಡಿದು ಸಾರ್ವಜನಿಕ ಸಭೆ-ಸಮಾರಂಭಗಳೂ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದಿವೆ. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮುಖಂಡರು ಹಾಗೂ ಸ್ಥಳೀಯರನ್ನು ಭೇಟಿ ಮಾಡಿದ್ದೇನೆ. ಮಹಿಳಾ ಮುಖಂಡರನ್ನೂ ಭೇಟಿ ಮಾಡಿದ್ದೇನೆ. ಎಲ್ಲರೂ ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದಾರೆ.
ಜನಾಭಿಪ್ರಾಯ ಹೇಗಿದೆ?, ಕ್ಷೇತ್ರದ ಜನ ನಿಮಗೇಕೆ ಮತ ಹಾಕಬೇಕು?: ಜನರ ಅಭಿಪ್ರಾಯ ಉತ್ತಮವಾಗಿದೆ. ನೂರಕ್ಕೆ ನೂರರಷ್ಟು ಗೆಲುವಿನ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಜನರಿಗಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಕಾರಣ. ರಾಜ್ಯದಲ್ಲಿ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಇದಕ್ಕೆ ಮತ್ತೊಂದು ಉದಾಹರಣೆ. ಯುಕೆಸಿ ಪ್ರಾಜೆಕ್ಟ್, ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಅಭಿವೃದ್ಧಿ, ಯುವ ಸಮುದಾಯಕ್ಕೆ ಉದ್ಯೋಗ ನೀಡುವಂತಹ ಕೈಗಾರಿಕೆಗಳನ್ನು ತರುವುದು, ಕಳಸಾ ಬಂಡೂರಿ ಸೇರಿದಂತೆ ಹಲವು ಅಭಿವೃದ್ಧಿ ಕಾಯಕ ಆಗಬೇಕಿದೆ. ಈ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯಬೇಕು ಎಂಬ ನಿಟ್ಟಿನಲ್ಲಿ ಮತ ಕೇಳುವೆ. ಇದಕ್ಕೆ ಕ್ಷೇತ್ರದ ಜನ ನನ್ನೊಟ್ಟಿಗಿರಲಿದ್ದಾರೆ ಎಂಬ ಭರವಸೆ ಇದೆ.
ಸ್ವಪಕ್ಷೀಯರಾದ ವೀಣಾ ಕಾಶಪ್ಪನವರ ಭಿನ್ನಾಭಿಪ್ರಾಯವನ್ನು ಹೇಗೆ ಶಮನ ಮಾಡಿದ್ದೀರಿ?: ಅವರು ನಮ್ಮ ಪಕ್ಷದ ಒಂದು ಭಾಗ. ಕಾಂಗ್ರೆಸ್ ಪರಿವಾರದ ಓರ್ವ ಸದಸ್ಯರು ಕೂಡ ಹೌದು. ಹಾಗಾಗಿ ಈ ವಿಚಾರದಲ್ಲಿ ವೀಣಾ ಕಾಶಪ್ಪನವರ್ ನಮ್ಮ ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆ ಎಂಬ ವಿಶ್ವಾಸ ಇದೆ. ಅವರ ಮನವೊಲಿಕೆ ಮಾಡುವ ಎಲ್ಲ ಪ್ರಯತ್ನಗಳು ನಡೆದಿದ್ದು, ಫಲಪ್ರದ ಆಗಲಿದೆ ಎಂಬ ನಂಬಿಕೆ ಕೂಡ ಇದೆ. ಪಕ್ಷದ ಹಿರಿಯರ ಸಮ್ಮುಖದಲ್ಲಿ ಅವರನ್ನು ಪ್ರಚಾರ ಕಾರ್ಯಕ್ಕೆ ಕರೆತರುವ ಕೆಲಸ ನಡೆದಿದೆ.
ಹೊರಗಿನವರು ಎಂಬ ಮಾತಿದೆ, ಹೇಗೆ ನಿಭಾಯಿಸುತ್ತೀರಿ?: ನಾನು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದವಳು. ಬಾಗಲಕೋಟೆಯಲ್ಲಿರುವ ಎಲ್ಲ ಕಾರ್ಯಕರ್ತರು ನಮ್ಮವರು. ಇತ್ತೀಚೆಗೆ ಜಿಟಿ ಪಾಟೀಲ್ ಸಾಹೇಬರ ಮನೆಯಲ್ಲಿ ಸಭೆ ನಡೆಸಿದೆವು. ಈ ವೇಳೆ ಪಾಟೀಲರು ನನ್ನನ್ನು ದತ್ತು ಪುತ್ರಿ ಎಂದು ಸಂಭೋಧಿಸಿದರು. ಅವರ ಹೇಳಿಕೆಯಿಂದ ನಾನು ಬೀಳಗಿ ತಾಲೂಕಿನ ಮಗಳಾಗಿದ್ದೇನೆ. ಆರ್ಬಿ ತಿಮ್ಮಾಪೂರ್ ನನ್ನನ್ನು ಸಹೋದರಿ ಅಂದರು. ಅವರ ಹೇಳಿಕೆಯಿಂದ ನಾನು ಮುಧೋಳದ ಸಹೋದರಿ ಆದೆ. ಆನಂದ್ ನ್ಯಾಮಗೌಡ ನನಗೆ ಆಪ್ತರು, ಎಸ್ಆರ್ ಪಾಟೀಲ್, ಎಚ್‌ವೈ ಮೇಟಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಮನೆ ಸದಸ್ಯೆ ಆಗಿದ್ದೇನೆ. ವಿಜಯಪುರದಿಂದ ಬಂದಿರಹುದು. ಆದರೆ, ಬಾಗಲಕೋಟೆಯೇ ನನ್ನ ಮನೆ.
ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ಹೇಗೆ ಮಾಡುವಿರಿ?: ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕರು ನಮ್ಮವರು. ಅವರ ಮುಂದಾಳತ್ವ ಹಾಗೂ ನೇತೃತ್ವದಲ್ಲಿಯೇ ಪ್ರಚಾರ ಕಾರ್ಯ ನಡೆಸುತ್ತೇವೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಗಜಕೇಸರಿಯಿಂದ ಪಕ್ಷದ ಮೇಲೆ ಉಂಟಾಗುವ ಪರಿಣಾಮ ಏನು?: ಗಜಕೇಸರಿ ಎಂಬ ಪದವನ್ನು ಉಪಯೋಗ ಮಾಡಿರುವ ಉದ್ದೇಶವೇ ಬೇರೆ ಎಂದರು. ಮಾಧ್ಯಮದವರು ಪಿ ಸಿ ಗದ್ದಿಗೌಡರ ಬಗ್ಗೆ ಪ್ರಶ್ನೆ ಮಾಡುತ್ತಾ, "ಮೇಡಮ್ ನಿಮ್ಮ ಪ್ರತಿಸ್ಪರ್ಧಿ ಗದ್ದಿಗೌಡರ ಲಕ್ಕು ಭಾರಿ ಅದ, ನೀವು ಅವರನ್ನು ಹೇಗೆ ಎದುರಿಸುತ್ತೀರಿ' ಎಂದು ಕೇಳಿದರು. ಇದಕ್ಕೆ, ನಾನು ಕೂಡ ಲಕ್ಕಿ ಸ್ಟಾರ್ ಕುಟುಂಬದಲ್ಲಿ ಹುಟ್ಟಿದ್ದೇನೆ. ಈ ಗಜಕೇಸರಿ ಅನ್ನೋದು ಒಂದು ಯೋಗ. ಎಲ್ಲರೂ ಒಳ್ಳೆಯ ಯೋಗದಲ್ಲಿ ಹುಟ್ಟಿರುತ್ತಾರೆ ಎಂದು ಹೇಳಲಾಗದು. ಎಷ್ಟು ಪ್ರರಿಶ್ರಮ ಪಡುತ್ತೇವೋ ಅಷ್ಟು ಒಳ್ಳೆಯದಾಗುತ್ತದೆ. ಅದನ್ನು ಕಾಂಗ್ರೆಸ್ ಪಕ್ಷದಿಂದ ಪಡೆದುಕೊಳ್ಳುತ್ತೇನೆ.
ಪ್ರತಿಸ್ಪರ್ಧಿ ಪಿ ಸಿ ಗದ್ದಿಗೌಡರ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಮ್ಮ ಅಭಿಪ್ರಾಯ?: ನಾಲ್ಕು ಭಾರಿ ಜಯಗಳಿಸಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಪಿ ಸಿ ಗದ್ದಿಗೌಡರ ಏನು ಕೆಲಸ ಮಾಡಿದ್ದಾರೆ ಅನ್ನೋದು ಕ್ಷೇತ್ರದ ಜನ ಗಮನಿಸಿದ್ದಾರೆ. ಅವರು ಏನು ಮಾಡಿದ್ದಾರೆ, ಏನು ಮಾಡಿಲ್ಲ ಎಂಬುದು ಮುಖ್ಯವಲ್ಲ. ಮುಂದಿನ ಐದು ವರ್ಷದಲ್ಲಿ ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಕೆಲಸ ಮಾಡಿ ತೋರಿಸುತ್ತೇನೆ. ಬರುವ ಐದು ವರ್ಷಗಳ ಕಾಲ ನಿಮಗಾಗಿ ಶ್ರಮಿಸುವೆ. ಯುಕೆಪಿ, ನೀರಾವರಿ ಸೇರಿದಂತೆ ಹಲವು ಸಮಸ್ಯೆಗಳು ಕುರಿತು ಕೇಂದ್ರದಲ್ಲಿ ಧ್ವನಿ ಎತ್ತುವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವೆ. ಅವಕಾಶ ಮಾಡಿಕೊಟ್ಟರೆ ಸರ್ವಾಂಗೀಣ ಅಭಿವೃದ್ಧಿ ಮಾಡಿ ತೋರಿಸುವೆ. ಕಳೆದ ಹಲವು ದಿನಗಳಿಂದ ಒಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನನಗೂ ಅವಕಾಶ ಕೊಡಿ.
ಎಷ್ಟು ಮತಗಳ ಅಂತದಿಂದ ಗೆಲ್ಲಬೇಕು ಎಂಬ ನಿರೀಕ್ಷೆ ಇದೆ?: ನನ್ನ ಗೆಲುವಿನ ಅಂತರ ಚುನಾವಣೆ ದಿನ ಕ್ಷೇತ್ರದ ಮತದಾರರು ನಿರ್ಧರಿಸುತ್ತಾರೆ. ಎಲ್ಲವನ್ನೂ ಈಗಲೇ ಹೇಳಿದರೆ ಚುನಾವಣಾ ಫಲಿತಾಂಶದ ದಿನ ಏನು ಹೇಳಲಿ? ಎಲ್ಲವೂ ಅಂದೇ ಹೇಳುವೆ. ಆದರೆ, ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಎಲ್ಲರೂ ಪರಿಶ್ರಮ ವಹಿಸುತ್ತಿದ್ದಾರೆ. ನಮ್ಮ ಪರಿಶ್ರಮಕ್ಕೆ ಕ್ಷೇತ್ರದ ಜನ ಫಲ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಸದ್ಯ ರಾಜಕೀಯಕ್ಕೆ ಬರಲ್ಲ: ಸುಮಲತಾ - Sumalatha