ಶಿವಮೊಗ್ಗ: ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಜಿಲ್ಲೆಯ ಸಾಗರ ನಗರದಲ್ಲಿ ನಡೆದಿದೆ. ಅಸೀಫ್ ಹಾಗೂ ಅಜುಂ ದಂಪತಿಯ ಪುತ್ರಿ ಆನಂ ಫಾತಿಮಾ (1.5 ವರ್ಷ) ಮೃತಪಟ್ಟ ಪುಟ್ಟ ಕಂದಮ್ಮ.
ಅಸೀಫ್ ಹಾಗೂ ಅಜುಂ ಸಾಗರದ ಜೋಸೆಫ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಯ ಪುತ್ರಿ ಭಾನುವಾರ ಸಂಜೆ ಆಟವಾಡುತ್ತ, ಮನೆಯ ಬಚ್ಚಲು ಮನೆಯತ್ತ ಹೋಗಿದೆ. ಈ ವೇಳೆ ಅಲ್ಲಿ ನೀರು ತುಂಬಿದ್ದ ಬಕೆಟ್ನೊಳಗೆ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಆದರೆ ಇದು ಪೋಷಕರ ಗಮನಕ್ಕೆ ಬಂದಿರಲಿಲ್ಲ. ಕೆಲ ಹೊತ್ತಿನ ಬಳಿಕ ದಂಪತಿಯು ಮಗುವನ್ನು ಹುಡುಕಾಡಿದಾಗ ಬಕೆಟ್ನಲ್ಲಿ ಬಿದ್ದಿರುವುದು ಗೊತ್ತಾಗಿದೆ. ಆದರೆ, ಅದಾಗಲೇ ಮಗುವಿಗೆ ನೀರಿನಲ್ಲಿ ಬಿದ್ದು ಉಸಿರುಗಟ್ಟಿತ್ತು.
ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಮಗು ಸಾವನ್ನಪ್ಪಿದೆ ಎಂದು ವೈದ್ಯರು ದಂಪತಿಗೆ ತಿಳಿಸಿದ್ದಾರೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ದಂಪತಿಗೆ ಬರಸಿಡಿಲು ಬಡಿದಂತಾಗಿದೆ. ಸಾಗರ ಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಲಬುರಗಿ ಶರಣಬಸವೇಶ್ವರ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಭದ್ರತಾ ಸಿಬ್ಬಂದಿ ಸಾವು; ಇನ್ನೋರ್ವನಿಗೆ ಗಾಯ