ಬೆಂಗಳೂರು: ತಮ್ಮ ಕಕ್ಷಿದಾರರ ವಿರುದ್ಧ ದುರುದ್ದೇಶಪೂರಿತವಾಗಿ ಚುನಾವಣಾ ಅಕ್ರಮ ಆರೋಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ ಅವರು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ನಮ್ಮ ಕಕ್ಷಿದಾರರ ವಿರುದ್ದ 11 ಆರೋಪಗಳನ್ನು ಮಾಡಲಾಗಿದೆ. ಈ ಪೈಕಿ ಚುನಾವಣಾ ವೆಚ್ಚದ ಬಗ್ಗೆ ಪ್ರಮುಖದ್ದಾಗಿದೆ. ಎಲ್ಲ ಆರೋಪಗಳು ಸುಳ್ಳುಗಳಿಂದ ಕೂಡಿದ್ದು, ಮುಖ್ಯಮಂತ್ರಿಯಾದ ಬಳಿಕ ದುರುದ್ದೇಶಪೂರಿತ ಆರೋಪ ಮಾಡಲಾಗಿದೆ. ಚುನಾವಣಾಧಿಕಾರಿ ಅಥವಾ ಚುನಾವಣಾ ಆಯೋಗಕ್ಕೆ ತಮ್ಮ ಕಕ್ಷಿದಾರ ಚುನಾವಣಾ ವೆಚ್ಚದ ಮಿತಿ ಮೀರಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ದೂರು ನೀಡಿಲ್ಲ. ಈ ಎಲ್ಲ ಆರೋಪಗಳನ್ನು ಮುಖ್ಯಮಂತ್ರಿಯಾದ ಬಳಿಕ ಮಾಡಲಾಗಿದ್ದು, ಎಲ್ಲವೂ ಕಟ್ಟು ಕತೆ ಎಂದು ತಿಳಿಸಿದರು.
ಗ್ಯಾರಂಟಿಗಳನ್ನು ಒಳಗೊಂಡ ಪ್ರಣಾಳಿಕೆ ಪಕ್ಷಕ್ಕೆ ಸೇರಿದ್ದು, ಇದನ್ನು ತಮ್ಮ ಕಕ್ಷಿದಾರರ ವೆಚ್ಚಕ್ಕೆ ಸೇರಿಸಬಹುದೇ? ಗ್ಯಾರಂಟಿ ಯೋಜನೆ ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಇದು ಮುಖ್ಯಮಂತ್ರಿಯಾದ ಮೇಲೆ ಇದು ಅನ್ವಯಿಸುವುದೇ?. ಎಷ್ಟು ಹಣ ವೆಚ್ಚ ಮಾಡಿದ್ದಾರೆ. ಯಾವಾಗ, ಹೇಗೆ, ಎಲ್ಲಿ ವೆಚ್ಚ ಮಾಡಿದ್ದಾರೆ ಎಂಬುದು ಸಹ ಅರ್ಜಿಯಲ್ಲಿಲ್ಲ. ವಾಹನಗಳಿಗೆ ವೆಚ್ಚ ಮಾಡಿದ್ದಾರೆಯೇ? ಕಾರಿಗೆ, ಭಿತ್ತಿಪತ್ರ, ಪೋಸ್ಟರ್ಗಾಗಿ ವೆಚ್ಚ ಮಾಡಲಾಗಿದೆಯೇ? ಕ್ಷೇತ್ರದಲ್ಲಿ ನೂರಾರು ಗ್ರಾಮಗಳಿವೆ. ಯಾವ ಹಳ್ಳಿಯಲ್ಲಿ ವೆಚ್ಚ ಮಾಡಲಾಗಿದೆ. ಮೈಸೂರು ನಗರ ತಮ್ಮ ಕಕ್ಷಿದಾರರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನಗರದಲ್ಲಿ ವೆಚ್ಚ ಮಾಡಲಾಗಿದೆಯೇ ಅಥವಾ ಹಳ್ಳಿಗಳಲ್ಲಿ ವೆಚ್ಚ ಮಾಡಲಾಗಿದೆಯೇ? ಈ ಕುರಿತು ಯಾವುದೇ ವಿಚಾರ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ ಎಂದು ಆಕ್ಷೇಪಿಸಿದರು.
ಚುನಾವಣಾ ವೆಚ್ಚದ ಹಣವನ್ನು ಒಂದೇ ದಿನ ವೆಚ್ಚ ಮಾಡದಿರಬಹುದು. ಉಮೇದುವಾರಿಕೆ ಸಲ್ಲಿಸಿದ ಬಳಿಕ ವೆಚ್ಚ ಮಾಡಿರಬಹುದು. ಎರಡು ವಾರಗಳ ನಂತರ ಮಾಡಿರಬಹುದು. ಸಾಕಷ್ಟು ಹಣ ವೆಚ್ಚ ಮಾಡಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದ್ದರೆ ಇದಕ್ಕೆ ಪೂರಕವಾಗಿ ದಾಖಲೆ ನೀಡಬೇಕು. 40 ಲಕ್ಷ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದ್ದಾರೆ ಎಂಬುದು ಅರ್ಜಿದಾರರ ಆರೋಪವಾಗಿದೆ. ಇದನ್ನು ಅರ್ಜಿಯಲ್ಲಿ ವಿವರಿಸಿಲ್ಲ. ಚುನಾವಣಾ ಅಕ್ರಮ ಎಸಗಲಾಗಿದೆ ಎಂಬುದಕ್ಕೆ ಅವರು ಎಲ್ಲಿ, ಹೇಗೆ ನಡೆದಿದೆ ಎಂಬುದರ ಪ್ರಮಾಣಪತ್ರ ಸಲ್ಲಿಕೆ ಮಾಡಿಲ್ಲ ಎಂದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.
ಇದನ್ನೂ ಓದಿ: ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಬೋರ್ಡ್ ಪರೀಕ್ಷೆ: ಸರ್ಕಾರದ ಸಮರ್ಥನೆ