ತುಮಕೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ಏ.4 ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದಾರೆ. ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾಳೆ ಸಂಜೆ ಚನ್ನಪಟ್ಟಣದಲ್ಲಿ ಪಕ್ಷದ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ನಂತರ ನಾನು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಎರಡೂ ಪಕ್ಷಗಳ ಮುಖಂಡರು ಅಭಿಮಾನಿಗಳು, ಹಿತೈಷಿಗಳು ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆ. ರ್‍ಯಾಲಿ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಬೆ.ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆ ಸಂಬಂಧ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪಕ್ಷದವರು ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದರು. ಸಿದ್ದಗಂಗಾ ಶ್ರೀ ಶಿವಕುಮಾರ್ ಸ್ವಾಮೀಜಿಗಳ 117ನೇ ಜಯಂತ್ಯುತ್ಸವ ನಿಮಿತ್ತ ಡಾ.ಮಂಜುನಾಥ ಅವರು ಮಠಕ್ಕೆ ತೆರಳಿ ಗದ್ದುಗೆ ದರ್ಶನ ಮಾಡಿದರು.
ಮಠದಲ್ಲಿ ಶ್ರೀಗಳ ಜನ್ಮದಿನ ಆಚರಿಸಲಾಗುತ್ತಿದೆ. ಬೆಳಗ್ಗೆ 5 ಗಂಟೆಯಿಂದಲೇ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 8 ಗಂಟೆಗೆ ಶ್ರೀಗಳ ಪುತ್ಥಳಿಯನ್ನ ರುದ್ರಾಕ್ಷಿ ಮಂಟಪದಲ್ಲಿಟ್ಟು ವಾದ್ಯಮೇಳ, ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮಾಡಲಾಯಿತು. ಹರಗುರುಶರಣರ ನೇತೃತ್ವದಲ್ಲಿ ಸಿದ್ದಗಂಗಾ ಮಠದ ಆವರಣದಲ್ಲಿ ಮೆರವಣಿಗೆ ನೆರವೇರಿತು.
ಮುಖ್ಯವಾಗಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯನ್ನು ವಿವಿಧ ಹಣ್ಣುಗಳಿಂದ ಅಲಂಕಾರ ಮಾಡಲಾಗಿರುವುದು ವಿಶೇಷವಾಗಿದೆ. ಅದರಲ್ಲೂ ಶಿವಕುಮಾರ್ ಸ್ವಾಮೀಜಿ ನಿತ್ಯ ಬಳಸುತ್ತಿದ್ದಂತಹ ಪರಂಗಿ ಹಣ್ಣುಗಳನ್ನು ಹೆಚ್ಚಾಗಿ ಅಲಂಕಾರದಲ್ಲಿ ಬಳಸಲಾಗಿರುವುದು ವಿಶೇಷವಾಗಿದೆ. ಹಲಸು, ಕಿತ್ತಳೆ, ಮೋಸಂಬಿ, ಪಪ್ಪಾಯ ಸೇರಿದಂತೆ ಹತ್ತಕ್ಕೂ ಹೆಚ್ಚು ಹಣ್ಣುಗಳಿಂದ ಸ್ವಾಮೀಜಿ ಗದ್ದುಗೆ ಅಲಂಕರಿಸಲಾಗಿದೆ. ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರು ಗದ್ದುಗೆಯ ದರ್ಶನ ಪಡೆಯುತ್ತಿದ್ದಾರೆ.