ಬೆಳಗಾವಿ: ಪಂಡರಾಪುರ ವಿಠ್ಠಲನ ದರ್ಶನನಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಭಕ್ತರ ಮೇಲೆ ಮಹಾರಾಷ್ಟ್ರದ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಆಷಾಢ ಏಕಾದಶಿ ನಿಮಿತ್ತ ಪಂಡರಾಪುರದಲ್ಲಿ ವಿಠ್ಠಲನ ದರ್ಶನ ಪಡೆದು ವಾಪಸ್ ಬರುತ್ತಿದ್ದಾಗ ಬೆಳಗಾವಿ ತಾಲೂಕಿನ ತುರಮುರಿ ಗ್ರಾಮದ ಭಕ್ತರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸುರೇಶ್ ರಾಜುಕರ್, ಪರಶುರಾಮ ಜಾಧವ್ ಮತ್ತು ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸಾಂಗಲಿ ಜಿಲ್ಲೆ ಮಿರಜ್ ತಾಲೂಕಿನ ಮಾಲಗಾಂವ ಗ್ರಾಮದಲ್ಲಿ ಕಿಡಿಗೇಡಿಗಳು ಗೂಂಡಾವರ್ತನೆ ತೋರಿದ್ದಾರೆ. ಲಾರಿಯಲ್ಲಿ ವಾಪಸಾಗುತ್ತಿದ್ದ ವೇಳೆ ದಾರಿ ತಪ್ಪಿ ಮಾಲಗಾಂವ್ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಲಾರಿಗೆ ಅಡ್ಡ ಬಂದ ಕಾರು ಚಾಲಕ ಕಿರಿಕ್ ಮಾಡಿದ್ದಾನೆ. ಬಳಿಕ ಪಾನಪತ್ತ ಕಿಡಿಗೇಡಿಗಳು ಭಕ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪದಡಿ ದೂರು ದಾಖಲಾಗಿದೆ.
ಮೂವರು ಭಕ್ತರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕದ ಭಕ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಬೆಳಗಾವಿಯ ಭಕ್ತರು ಮನವಿ ಮಾಡಿದ್ದಾರೆ.