ಚಾಮರಾಜನಗರ: ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ (ಏ.29) ಮರು ಮತದಾನ ನಡೆಯಲಿದ್ದು, ಚುನಾವಣಾ ಸಿಬ್ಬಂದಿ ಇವಿಎಂ ಹಾಗೂ ಚುನಾವಣಾ ಸಾಮಗ್ರಿ ಹಿಡಿದು ಗ್ರಾಮಕ್ಕೆ ತೆರಳಿದ್ದಾರೆ. ಹನೂರಿನ ಮಸ್ಟರಿಂಗ್ ಕೇಂದ್ರ ಕ್ರಿಸ್ತರಾಜ ಶಾಲೆಗೆ ಚುನಾವಣಾ ಸಿಬ್ಬಂದಿ ಮರು ಮತದಾನಕ್ಕೆ ತೆರಳಿದ್ದಾರೆ.
ಇಂಡಿಗನತ್ತ ಹಾಗೂ ಮೆಂದಾರೆ ಸೇರಿ ಮತಗಟ್ಟೆ 146 ರಲ್ಲಿ 528 ಮತದಾರರು ಇದ್ದಾರೆ. ಮತಗಟ್ಟೆ 146 ರಲ್ಲಿ ನಡೆಯಲಿರುವ ಮರು ಮತದಾನಕ್ಕೆ ಪಿಆರ್ಒ ಆಗಿ ಕೆ. ವೆಂಕಟೇಶ್, ಎ ಪಿಆರ್ ಒ ಆಗಿ ಎಸ್. ಮಹದೇವಸ್ವಾಮಿ, ಪೋಲಿಂಗ್ ಆಫೀಸರ್ ಗಳಾಗಿ ಎಸ್. ಚಂದ್ರ, ಕೆ. ಎಸ್. ಮಹಾದೇವಸ್ವಾಮಿ, ಕೆ. ಮಹೇಶ್ ಅವರನ್ನು ನಿಯೋಜನೆ ಮಾಡಲಾಗಿದೆ.
ಗಲಾಟೆಯಾಗಿದ್ದ ಶಾಲೆಯಲ್ಲೇ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಮತದಾನ ಕುರಿತು ಜಾಗೃತಿ ಮೂಡಿಸಲಾಗಿದೆ.
ಮತದಾನಕ್ಕೆ ಸಕಲ ವ್ಯವಸ್ಥೆ: ಮರು ಮತದಾನಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಈ ಮರು ಚುನಾವಣೆಯಲ್ಲಿ ಭಾಗಿಯಾಗಿದ್ದು, ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ, ಮತಗಟ್ಟೆ ಸಿಬ್ಬಂದಿ ಇಂಡಿಗನತ್ತಕ್ಕೆ ತೆರಳಿದ್ದು, ಮತದಾನ ಕುರಿತು ಗ್ರಾಮದಲ್ಲಿ ಟಾಂಟಾಂ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮೊಕ್ಕಾಂ ಹೂಡಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಮರು ಮತದಾನ ಯಾಕೆ; ಶುಕ್ರವಾರ ನಡೆದ ಮತದಾನವನ್ನು ಬಹಿಷ್ಕರಿಸಿದ್ದಲ್ಲದೇ ಗ್ರಾಮದ ಕೆಲವರು ಮತಗಟ್ಟೆಯನ್ನೇ ಧ್ವಂಸ ಮಾಡಿದ್ದ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂಓದಿ:ಮತಗಟ್ಟೆ ಧ್ವಂಸ ಪ್ರಕರಣ: 25 ಆರೋಪಿಗಳ ಬಂಧನ, ಗ್ರಾಮವೇ ಖಾಲಿ ಖಾಲಿ! - Polling booth vandalism case