ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದುಷ್ಟ ಶಕ್ತಿಗಳು ಬಿಲದಿಂದ ಹೊರ ಬಂದಿವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಆರೋಪಿಸಿದ್ದಾರೆ. ನಿನ್ನೆ ನಡೆದ ಗ್ಯಾಂಗ್ ವಾರ್ನಿಂದ ಶಿವಮೊಗ್ಗದ ಜನ ಕಂಗಾಲಾಗಿದ್ದಾರೆ. ಅದರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ದುಷ್ಟ ಶಕ್ತಿಗಳು ಬಿಲದಿಂದ ಹೊರ ಬಂದು ಜಾಗೃತವಾಗಿವೆ. ಅದೇ ರೀತಿ ಶಿವಮೊಗ್ಗ ಮತ್ತೆ ಆ ದಿನಗಳಿಗೆ ಮರಳುತ್ತಿದೆ. ಇದು ಎಲ್ಲರನ್ನೂ ಭಯಭೀತರನ್ನಾಗಿ ಮಾಡಿದೆ.
ತುಷ್ಟೀಕರಣದ ನೀತಿ: ವಿಶೇಷವಾಗಿ ಕಾಂಗ್ರೆಸ್ ಆಡಳಿತದಲ್ಲಿ ತುಷ್ಟೀಕರಣದ ನೀತಿಯಿಂದಾಗಿ ಪೊಲೀಸರ ಮಾನಸಿಕತೆ ಸಹ ಹಾಳಾಗಿದೆ. ಕಾನೂನು ಸುವ್ಯವಸ್ಥೆಗಿಂತ ಪೊಲೀಸರು ಬೇರೆ ರೀತಿ ಯೋಚನೆ ಮಾಡುತ್ತಿದ್ದಾರೆ ಎಂದು ಇತ್ತೀಚಿನ ದಿನಗಳಲ್ಲಿ ನಡೆದ ಅನೇಕ ಪ್ರಕರಣಗಳಿಂದ ನಮಗೆ ಅನ್ನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ನಡೆದ ರಾಗಿಗುಡ್ಡದ ಘಟನೆಯಿಂದ ಹಿಡಿದು ಶಿವಮೊಗ್ಗ ಪೊಲೀಸರು ದ್ರೋಹಿಗಳನ್ನು ನಿರ್ವಹಿಸದ ರೀತಿ ಕೆಲಸ ಮಾಡುವವರಿಗೆ ಕೆಟ್ಟ ಸಂದೇಶ ಕೊಟ್ಟಿದೆ. ಇದರ ಪರಿಣಾಮ ನಿನ್ನೆ ನಡೆದಿರುವ ಗ್ಯಾಂಗ್ ವಾರ್ ಸಾಕ್ಷಿ. ನಿತ್ಯ ಗ್ರಾಮೀಣ ಭಾಗದಿಂದ ಬಂದು ಹೋಗುವ ಹೆಣ್ಣು ಮಕ್ಕಳು ಭಯ ಭೀತರಾಗಿದ್ದಾರೆ. ಈಚೆಗೆ ಕೆಲವರು ಬಂದು ಜೇಬಿಗೆ ಕೈ ಹಾಕುತ್ತಾರೆ. ಮೊಬೈಲ್ ಕಿತ್ತುಕೊಳ್ಳುತ್ತಾರೆ. ಇದನ್ನು ಕೇಳಿದರೆ, ಪ್ರತಿಭಟನೆ ನಡೆಸಲು ಮುಂದಾದರೆ ಕ್ಷಣಾರ್ಧದಲ್ಲಿ ಹತ್ತಾರು ಜನ ಸೇರ್ತಾರೆ, ಭಯಭೀತವಾದ ವಾತಾವರಣ ಸೃಷ್ಟಿವಾಗುತ್ತಿದೆ ಎಂದು ತಿಳಿಸಿದರು.
ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹೋದರೆ, ಎಫ್ಐ ಆರ್ ಆಗಲ್ಲ, ಹಿಂದೆ ನಡೆದ ಕೊಲೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಹಲವು ಬದಲಾವಣೆ ಮಾಡಿದ್ದರು. ಹತ್ತಾರು ವರ್ಷಗಳಿಂದ ಇಲ್ಲೇ ಬೇರು ಬಿಟ್ಟಿದ್ದವರನ್ನು ಬದಲಾವಣೆ ಮಾಡಿದ್ದರು. ನಮ್ಮ ಸರ್ಕಾರ ಇದ್ದಾಗ ವಿದ್ರೋಹಿಗಳ ಜೊತೆ ಕೈ ಜೋಡಿಸಿದ್ದವರನ್ನು ಬೇರೆ ಕಡೆ ಕಳುಹಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿತು. ದೂರು ಕೊಡಲು ಹೋದವರನ್ನೇ ಹಿಂಸಿಸುವ ವಾತಾವರಣ ನಿರ್ಮಾಣವಾಗಿದೆ.
ಮತದಾನದ ಮರು ದಿವಸವೇ ಇದು ನಡೆದಿದೆ. ಇವರಿಗೆ ನಮ್ಮದೇ ಸರ್ಕಾರ ಬಂದಿದೆ ಎಂದು ಈ ರೀತಿಯ ಕೃತ್ಯ ಹೆಚ್ಚಾಗಿದೆ. ಈ ಕೃತ್ಯ ನಡೆಯುತ್ತದೆ ಎಂದು ಮೊದಲೇ ಪೊಲೀಸರಿಗೆ ತಿಳಿದಿದ್ದರೂ ಸಹ ಸಂಭವನೀಯ ಘಟನೆಯನ್ನು ಪೊಲೀಸರು ತಡೆಯಲಿಲ್ಲ. ಮತದಾನದ ದಿನವೇ ಕೆಲವರು ಲಾಂಗ್ ಮಚ್ಚು ಹಿಡಿದುಕೊಂಡು ಬಂದಿದ್ದರು. ಆಗ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಅಂದು ಬಂದವರನ್ನು ಪೊಲೀಸರು ಯಾಕೆ ಅರೆಸ್ಟ್ ಮಾಡಲಿಲ್ಲ. ಇದರ ಕುರಿತು ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.
ಕೆಲವೊಂದು ಕಾಲೊನಿಗಳಿಗೆ ಕಾಲು ಹಿಡಿಯಲು ಹೆದರುತ್ತಿದ್ದಾರೆ. ರೌಡಿಗಳು ನೀಡಿದ ಗಿಫ್ಟ್ಗಳನ್ನು ಪಡೆಯುವ ವಿಚಿತ್ರ ಸನ್ನಿವೇಶಗಳಿವೆ. ಶಿವಮೊಗ್ಗದಲ್ಲಿ ಗಾಂಜಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಎಸ್ಪಿ ಅವರ ಮೇಲೆಯೂ ಅನುಮಾನ ಬಂದಿದೆ. ಅವರು ಸರಿಯಾಗಿ ನಿರ್ವಹಿಸುವ ಪರಿಸ್ಥಿತಿಯಲ್ಲಿ ಇಲ್ಲ. ಎಸ್ಪಿ ಅವರಿಗೆ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ಹೇಳಿದರೂ ದೂರು ಹೇಳಿದವರ ವಿರುದ್ಧ ಅಸಮಾಧಾನ ತೋರುತ್ತಿದ್ದಾರೆ. ಟೀಂ ಲೀಡರ್ ಸರಿಯಾಗಿ ಇಲ್ಲದೇ ಹೋದರೆ ಇಂತಹ ಘಟನೆಗಳನ್ನು ಸರಿಯಾಗಿ ನಿರ್ವಹಿಸಲು ಆಗುವುದಿಲ್ಲ ಎಂದು ಆಪಾದಿಸಿದರು.
ದಂಪತಿ ಕಾರು ತಡೆದು ರಾಬರಿ: ನನ್ನ ತಾಲೂಕಿನೊಳಗೆ ಗಂಡ ಹೆಂಡತಿ ಕಾರಿನಲ್ಲಿ ಬರುವಾಗ ಕಾರು ತಡೆದು ರಾಬರಿ ನಡೆಸುವ ಪ್ರಯತ್ನ ನಡೆಸಲಾಗಿದೆ. ಇದು ಪೊಲೀಸರ ಒಂದು ವೀಕ್ ನೆಸ್ ಆಗಿದೆ. ಇದು ಪೊಲೀಸರ ಅಸಮರ್ಥತೆ ತೋರಿಸುತ್ತದೆ. ಎಸ್ಪಿ ಮಿಥುನ್ ಕುಮಾರ್ ಕಾರ್ಯನಿರ್ವಹಿಸುವ ರೀತಿ ಕೆಟ್ಟ ಮೆಸೇಜ್ ತೋರುತ್ತದೆ ಎಂದರು. ಇದರ ಬಗ್ಗೆ ಜಿಲ್ಲಾ ಮಂತ್ರಿ ವಿಶೇಷ ಗಮನ ಹರಿಸಬೇಕಿದೆ. ರಾಜ್ಯ ಸರ್ಕಾರ ಇದರ ಬಗ್ಗೆ ಸೂಕ್ತವಾದ ಗಮನ ಹರಿಸದೇ ಹೋದ್ರ ಶಿವಮೊಗ್ಗದಲ್ಲಿ ವಿಚಿತ್ರವಾದ ವಾತಾವರಣ ಉಂಟಾಗುತ್ತದೆ. ಜನರಿಗೆ ಆತ್ಮ ವಿಶ್ವಾಸ ನೀಡುವ ಕೆಲಸ ಪೊಲೀಸರಿಂದ ಆಗಬೇಕಿದೆ ಎಂದು ಹೇಳಿದರು.
ಇದನ್ನೂಓದಿ:ಪೆನ್ ಡ್ರೈವ್ ಪ್ರಕರಣ: ಶಿಕ್ಷೆ ಕೊಡಿಸುವ ಬದಲು ಪ್ರಚಾರ ಮಾಡಲಾಗುತ್ತಿದೆ; ಕುಮಾರಸ್ವಾಮಿ ಕಿಡಿ - H D Kumaraswamy