ದಾವಣಗೆರೆ : ಚನ್ನಗಿರಿ ಗಲಾಟೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಲ್ಲ. ಪೊಲೀಸರಿಗೆ ಧಿಕ್ಕಾರ ಎಂದು ಕೂಗಿದ್ದಾರೆ. ಹಾಗೇನಾದರೂ ಕೂಗಿರುವ ವಿಡಿಯೋ ಇದ್ರೆ ಕೊಡಲಿ, ಕ್ರಮ ಜರುಗಿಸುತ್ತೇವೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಆರ್ ತಿಳಿಸಿದರು.
ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಗೂ ಮುನ್ನ ಮಾತನಾಡಿದ ಅವರು, ಚನ್ನಗಿರಿ ಠಾಣೆಗೆ ಮಟ್ಕಾ ಆರೋಪಿಯನ್ನು ಕರೆತಂದಾಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿಗೆ ಭೇಟಿ ನೀಡಿದ್ದೇನೆ. ಅಧಿಕಾರಿಗಳ ಬಳಿ ಮಾಹಿತಿ ಕಲೆಹಾಕಿದ್ದೇನೆ. ಠಾಣೆ ಮೇಲೆ ಕಲ್ಲುತೂರಾಟದಲ್ಲಿ ಭಾಗಿಯಾದ 30 ಜನರನ್ನ ಬಂಧಿಸಲಾಗಿದೆ. ಉಳಿದ ನೂರಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಕಲ್ಲುತೂರಾಟದಲ್ಲಿ ಭಾಗಿಯಾದವರನ್ನು ವಿಡಿಯೋ ಅಧಾರವಾಗಿಟ್ಟುಕೊಂಡು ಬಂಧಿಸಲಾಗುತ್ತಿದೆ. ನಿರಪರಾಧಿಗಳಿದ್ದರೆ ಹೆದರುವ ಅವಶ್ಯಕತೆ ಇಲ್ಲ ಎಂದರು.
ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಪಿಎಂ ವರದಿ ಅವರಿಗೆ ಗೊತ್ತಿರುತ್ತದೆ. ಈ ಪ್ರಕರಣ ತನಿಖೆಯಲ್ಲಿ ಇರುವ ಕಾರಣ ಹೆಚ್ಚು ಮಾತನಾಡಲು ಬರುವುದಿಲ್ಲ ಎಂದರು. ಇನ್ನು ಆರೋಪಿ ಲಾಕಪ್ ಡೆತ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕಾಗಿಯೇ ಸಿಐಡಿಗೆ ತನಿಖೆ ಮಾಡಲು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ, ತನಿಖೆಯಲ್ಲಿ ಎಲ್ಲಾ ಬಹಿರಂಗ ಆಗಲಿದೆ ಎಂದು ತಿಳಿಸಿದರು.
ಸಸ್ಪೆಂಡ್ ಮಾಡಿರುವುದು ಸರ್ಕಾರದ ಮಟ್ಟದ ವಿಚಾರ : ಮೂರು ಜನ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಸರ್ಕಾರದ ಮಟ್ಟದ ವಿಚಾರ. ನಾನು ಮಾತನಾಡಲು ಬರಲ್ಲ. ಬಹಿರಂಗವಾಗಿ ಮಾತನಾಡಲ್ಲ. ಸಾಕಷ್ಟು ಪ್ರಕರಣಗಳು ಸಿಐಡಿ ತನಿಖೆ ನಡೆಯುವ ವೇಳೆ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಮಾನತು ಮಾಡಿರುವುದು ಸರಿ ಎಂದು ನನಗೆ ಅನಿಸುತ್ತಿದೆ. ಇನ್ನು ತನಿಖೆಯಲ್ಲಿ ಅವರಿಂದ ತಪ್ಪಿಲ್ಲ ಎಂದು ವರದಿಯಲ್ಲಿ ಬಂದ್ರೆ ಮತ್ತೆ ಸೇವೆಗೆ ಪರಿಗಣಿಸಲಾಗುತ್ತದೆ. ಚನ್ನಗಿರಿಯಲ್ಲಿ ನಡೆಯುತ್ತಿರುವ ಮಟ್ಕ ದಂಧೆ, ಗಾಂಜಾ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ಅದರ ಬಗ್ಗೆ ಗಮನಹರಿಸಲಾಗುವುದು. ಗಾಂಜಾ, ಮಟ್ಕ ದಂಧೆಯನ್ನು ಜಿಲ್ಲೆಯಿಂದ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಕಾನೂನು ಸುವ್ಯವಸ್ಥೆ ಬಗ್ಗೆ ಹೇಳುವುದಾದರೆ ಕಳೆದ ಮೂರು ವರ್ಷಗಳ ಅಂಕಿ-ಅಂಶಗಳು ನಮ್ಮ ಬಳಿ ಇದೆ. ಕೊಲೆಗಳ ಪ್ರಮಾಣ ಮೂರು ವರ್ಷಗಳಿಗಿಂತ ಈ ವರ್ಷ ಕಡಿಮೆ ಇದೆ. ಮೂರು ವರ್ಷಗಳಲ್ಲಿ 400, 450, 470 ಪ್ರಕರಣಗಳು ನಡೆದಿವೆ. ಕಳೆದ ವರ್ಷಗಿಂತ ಈ ವರ್ಷ ಕೊಲೆಗಳ ಪ್ರಮಾಣ ಹಾಗೂ ಇತರ ಅಪರಾಧಗಳ ಪ್ರಮಾಣ ಕಡಿಮೆ ಇದೆ. ಕಾನೂನು ಸುವ್ಯವಸ್ಥೆ ಹದೆಗೆಟ್ಟಿಲ್ಲ ಎಂದರು.
ಇನ್ನು ಶ್ರೀರಾಮ ಸೇನೆ ಲವ್ ಜಿಹಾದ್ ತಡೆಯಲು ಸಹಾಯವಾಣಿ ತೆರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನು ಬದ್ಧವಾಗಿ ಅವರವರು ಅವರವರ ಜೀವನಸಂಗಾತಿ ಆಯ್ಕೆ ಮಾಡಲು ಅವಕಾಶ ಇದೆ. ಇನ್ನು ನಮ್ಮ ಇಲಾಖೆಯಲ್ಲೂ ಹೆಲ್ಪ್ಲೈನ್ಗಳಿವೆ. ಇದನ್ನು ಕಾನೂನು ಬದ್ಧವಾಗಿ ವಿಚಾರ ಮಾಡುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದೆ ಗಮನಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ: ಬಂಧನ ಭೀತಿಯಿಂದ ಗ್ರಾಮ ತೊರೆದ ಜನ - People Leave Village