ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 9 ದಿನಗಳ ಚಳಿಗಾಲ ಅಧಿವೇಶನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕೊರೆಯುವ ಚಳಿಯಲ್ಲೂ ಸರ್ಕಾರದ ಬೆವರಿಳಿಸಲು ಈ ಬಾರಿಯೂ ಹೋರಾಟಗಾರರು ಸಜ್ಜಾಗಿದ್ದಾರೆ.
ಬೆಳಗಾವಿ ಅಧಿವೇಶನವನ್ನು 'ಪ್ರತಿಭಟನೆಗಳ ಅಧಿವೇಶನ' ಎಂದೇ ಕರೆಯುತ್ತಾರೆ. ಇಡೀ ಸರ್ಕಾರ ಇಲ್ಲಿಗೆ ಬರುವ ಹಿನ್ನೆಲೆಯಲ್ಲಿ ತಮ್ಮ ದೂರು, ದುಮ್ಮಾನಗಳನ್ನು ಆಳುವವರ ಮುಂದೆ ತೋಡಿಕೊಳ್ಳಲು ರೈತರು, ಕಾರ್ಮಿಕರು, ನೇಕಾರರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಸೇರಿ ವಿವಿಧ ವರ್ಗದವರು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಸುವರ್ಣ ವಿಧಾನಸೌಧ ಸಮೀಪದಲ್ಲಿರುವ ಕೊಂಡಸಕೊಪ್ಪ ಗುಡ್ಡ, ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಭಟನಾಕಾರರಿಗೆ ಟೆಂಟ್ಗಳನ್ನು ಹಾಕಲಾಗಿದೆ.
ಸದನದೊಳಗೆ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳು ಸಜ್ಜಾಗುತ್ತಿದ್ದರೆ, ಹೊರಗಡೆ ವಿವಿಧ ಸಂಘ-ಸಂಸ್ಥೆಗಳು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸರ್ಕಾರದ ಮುಂದಿಡಲಿದ್ದಾರೆ. ಈವರೆಗೆ ನಗರ ಪೊಲೀಸ್ ಆಯುಕ್ತರ ಬಳಿ 64 ಪ್ರತಿಭಟನೆಗಳು, 6 ಮನವಿ ಸಲ್ಲಿಸಲು ಅರ್ಜಿಗಳು ಬಂದಿವೆ. ಅಧಿವೇಶನ ಆರಂಭವಾಗುವ ಡಿ.9ರಿಂದ 19ವರೆಗೆ ಪ್ರತಿದಿನವೂ ಪ್ರತಿಭಟನೆಗಳು ಸದ್ದು ಮಾಡಲಿವೆ.
ಪ್ರಮುಖ ಸಂಘಟನೆಗಳು ಮತ್ತು ಬೇಡಿಕೆಗಳು:
- ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ: ಕೃಷಿ ಕಾಯ್ದೆ ರದ್ದತಿ, ಎಂಎಸ್‌ಪಿ ಕಾನೂನಾತ್ಮಕ ಜಾರಿ, ವಕ್ಫ್ ಮಂಡಳಿ ರದ್ದತಿ, ವಿದ್ಯುತ್ ಖಾಸಗೀಕರಣವನ್ನು ಕೈಬಿಡುವುದು.
- ಕರ್ನಾಟಕ ಕಬ್ಬು ಬೆಳೆಗಾರರ ಸಂಘ: ಕಬ್ಬಿಗೆ ಬೆಂಬಲ ಬೆಲೆ, ಕಬ್ಬು ಸಾಗಿಸುವ ವಾಹನಗಳಿಗೆ ಟೋಲ್ ಉಚಿತ, ತೂಕದಲ್ಲಿ ಆಗುವ ಮೋಸ ತಡೆಯುವುದು.
- ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ: 5 ಸಾವಿರ ರೂ. ಮಾಸಿಕ ಗೌರವ ಧನ ನಿಗದಿ, ಹೆಚ್ಚುವರಿ 2 ಸಾವಿರ ಮಾಸಿಕ ಗೌರವ ನಿಗದಿ ಸೇರಿ ಇನ್ನಿತರ ಬೇಡಿಕೆಗಳು.
- ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್-ಕಾರ್ಮಿಕರ ವಿವಿಧ ಬೇಡಿಕೆಗಳು.
- ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ: ವೇತನ ಹೆಚ್ಚಳ, ಸೇವಾ ಭದ್ರತೆ, ಸರ್ಕಾರಿ ಶಿಕ್ಷಕರಂತೆ ಅತಿಥಿ ಶಿಕ್ಷಕರಿಗೂ ರಜೆ ಸೌಲಭ್ಯ.
- ಕರ್ನಾಟಕ ದಲಿತ ಸಂಘರ್ಷ ಸಮಿತಿ: ಎಸ್‌ಸಿಪಿ, ಟಿಎಸ್‌ಪಿ ಅನುದಾನ ದಲಿತರಿಗೆ ಬಳಕೆ, ಸದಾಶಿವ ಆಯೋಗದ ವರದಿ ಜಾರಿ ಸೇರಿ ವಿವಿಧ ಬೇಡಿಕೆ.
- ಉತ್ತರ ಕರ್ನಾಟಕ ಅಂಜುಮನ್-ಎ-ಇಸ್ಲಾಂ, ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ವಕ್ಫ್ ಬೋರ್ಡ್, ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಿ ಹಜ್ ಭವನ ನಿರ್ಮಾಣ.
- ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ: ಕನಿಷ್ಠ ವೇತನ, ನಿವೃತ್ತರಿಗೆ ಇಡುಗಂಟು ನೀಡುವುದು.
- ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ: ಗೌರವ ಧನ ಕನಿಷ್ಠ 30 ಸಾವಿರ ರೂ. ನಿಗದಿ, ಸೇವಾ ಹಿರಿತನ ಪರಿಗಣನೆ, ವಾರಕ್ಕೆ 10 ಗಂಟೆಗಳ ಕಾರ್ಯಭಾರ.
- ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ: ಗ್ರ್ಯಾಚುಟಿ ಹಣ ಬಿಡುಗಡೆ.
ಇದಿಷ್ಟೇ ಅಲ್ಲದೇ, ಇನ್ನೂ ಹಲವು ಪ್ರತಿಭಟನೆಗಳು ನಡೆಯಲಿವೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿಗೆ ಸಿದ್ಧತೆ ನಡೆದಿದೆ. ವಕೀಲರ ನೇತೃತ್ವದಲ್ಲಿ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಲಿಂಗಾಯತ ಪಂಚಮಸಾಲಿ ಮಠದ ಬಸವಜಯಮೃತ್ಯುಂಜ ಸ್ವಾಮೀಜಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂಕರ್ ಈಟಿವಿ ಭಾರತದ ಜೊತೆಗೆ ಮಾತನಾಡಿ, "ರೈತರು, ನೇಕಾರರು ಸೇರಿ ಅನೇಕ ವರ್ಗದ ಜನರು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಾರೆ. ಗಡಿಯಲ್ಲಿ ಕನ್ನಡ ಗಟ್ಟಿಗೊಳಿಸಬೇಕು. ಸುವರ್ಣ ವಿಧಾನಸೌಧ ಪ್ರವೇಶ ದ್ವಾರದಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಪ್ರತಿಷ್ಠಾಪಿಸಬೇಕು. ಈ ಭಾಗದ ಜ್ವಲಂತ ಸಮಸ್ಯೆಗಳಾದ ಮಹದಾಯಿ, ಕಳಸಾ ಬಂಡೂರಿ ಯೋಜನೆ, ಕೃಷ್ಣಾ ಮೇಲ್ದಂಡೆ ಸೇರಿ ಮತ್ತಿತರ ಯೋಜನೆಗಳಿಗೆ ಕಾಯಕಲ್ಪ ನೀಡಬೇಕು. ಕೇವಲ ರಾಜಕೀಯ ಚರ್ಚೆಗೆ ಮಾತ್ರ ಅಧಿವೇಶನ ಸೀಮಿತವಾಗಬಾರದು. ಪಕ್ಷಾತೀತವಾಗಿ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಐತಿಹಾಸಿಕ ಅಧಿವೇಶನವಾಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ನಾಳೆಯಿಂದ ಬೆಳಗಾವಿ ಅಧಿವೇಶನ: ಒಳಜಗಳದಿಂದ ನಲುಗಿದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರದ ವಿರುದ್ಧ ಮುಗಿಬೀಳುವುದೇ?