ಬೆಂಗಳೂರು: ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ಮುಂದುವರಿಯಲಿದ್ದು, ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ಅವರು ಬಿಜೆಪಿ ಸೇರಿದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಅಭಿಷೇಕ್ ಅಂಬರೀಶ್ ಸದ್ಯಕ್ಕೆ ರಾಜಕಾರಣಕ್ಕೆ ಬರಲ್ಲ. ಸಿನಿಮಾದಲ್ಲಿ ಮಾತ್ರ ಇರ್ತಾರೆ. ಇನ್ನು ನಟ ದರ್ಶನ್, ಯಶ್ ಬೆಂಬಲ ಸದ್ಯಕ್ಕೆ ಅಪ್ರಸ್ತುತ. ಮೊನ್ನೆ ನಡೆದ ಸಭೆಯಲ್ಲಿ ದರ್ಶನ್ ಬಂದಿದ್ದರು. ಅವರಿಗೆ ಪಕ್ಷ ಅಲ್ಲ, ನನ್ನ ನಿರ್ಧಾರ ಮುಖ್ಯ ಅಂತ ಹೇಳಿದ್ದಾರೆ ಎಂದರು.
ನಾನು ಬಿಜೆಪಿಯಿಂದ ಮೋಸ ಹೋಗಿಲ್ಲ, ಮೋಸ ಹೋಗುತ್ತೇನೆ ಅಂತಿದ್ದರೆ ಅದೇ ಪಕ್ಷವನ್ನು ಯಾಕೆ ಸೇರ್ತಿದ್ದೆ? ಬಿಜೆಪಿಗೆ ಸಂಪೂರ್ಣ ಮನಸ್ಸಿಂದ, ಸಂತೋಷದಿಂದ ಸೇರಿದ್ದೇನೆ. ಈಗ ಮೊದಲ ಹೆಜ್ಜೆ ಹಾಕಿದ್ದೇನೆ. ಮುಂದೆ ವರಿಷ್ಠರು, ನಾಯಕರ ಜತೆ ಚರ್ಚಿಸಿ, ಸಲಹೆ ಪಡೆದು ಮುಂದುವರೆಯುತ್ತೇನೆ. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ, ನನಗೆ ಯಾವ ಪಾತ್ರ ಕೊಟ್ಟಿದ್ದಾರೆ, ಕೊಡ್ತಾರೆ ಅನ್ನೋ ಪ್ರಶ್ನೆ ಬರಲ್ಲ. ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ಬದ್ಧ ಎಂದು ತಿಳಿಸಿದರು.
400+ ಸೀಟು ಗೆಲ್ಲುವ ಗುರಿ: ಕುಮಾರಸ್ವಾಮಿ ಪರ ಪ್ರಚಾರ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಮಂಡ್ಯದಲ್ಲಿ ಮಾತ್ರ ನಡೆಯುತ್ತಿರುವ ಚುನಾವಣೆ ಅಲ್ಲ. ಮೋದಿ ಅವರು 400+ ಸೀಟು ಗೆಲ್ಲುವ ಗುರಿ ಹಾಕಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಸಹಕಾರ ಕೊಡಿ ಅಂತ ಕೇಳಿದ್ದಾರೆ, ಅವರ ಪರ ಪ್ರಚಾರಕ್ಕೆ ಬನ್ನಿ ಅಂತ ಕರೆದಿಲ್ಲ. ಪಕ್ಷದಿಂದ ಏನು ಸೂಚನೆ ಬರುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದರು.
ಮಂಡ್ಯದ ಜನರು ಇಷ್ಟು ದಿನ ನನ್ನನ್ನು ಸಂಸದೆಯಾಗಿ ನೋಡಿದ್ದರು. ಜಿಲ್ಲೆಯಲ್ಲಿ ನಾನು ಮಾಡಿದ ಸಾಧನೆಗಳನ್ನು ನೋಡಿದ್ದರು. ಇನ್ಮುಂದೆ ಮಾಜಿ ಸಂಸದೆಯಾಗಿ ನೋಡ್ತಾರೆ. ಎಲ್ಲದಕ್ಕಿಂತ ಮುಖ್ಯ ನಾನು ಮಂಡ್ಯದ ಸೊಸೆ, ಮುಂದೆ ಗೊತ್ತಿಲ್ಲ. ಸದ್ಯ ನಾನು ಬಿಜೆಪಿ ಸದಸ್ಯೆಯಾಗಿ ಪಕ್ಷದಲ್ಲಿ ಕೆಲಸ ಮಾಡ್ತೀನಿ ಎಂದರು.
ಇದನ್ನೂಓದಿ: ಅಧಿಕೃತವಾಗಿ ಬಿಜೆಪಿ ಸೇರಿದ ಸಂಸದೆ ಸುಮಲತಾ ಅಂಬರೀಶ್ - MP Sumalata joined BJP