ಹೈದರಾಬಾದ್: ಭಾರತದಲ್ಲಿ ಕ್ರಿಕೆಟ್ಗೆ ಇರುವ ಕ್ರೇಜ್ ಇತರೆ ಯಾವುದೇ ಕ್ರೀಡೆಗೂ ಇಲ್ಲವೇನೋ ಅನ್ನುವಂತ ವಾತಾವರಣ ಇದೆ. ಈಗಿನ ಯುವಕರಿಗೆ ಕ್ರಿಕೆಟ್ ಅಂದ್ರೆ ಹುಚ್ಚು. ಇದು ವಿಶ್ವದ ಎರಡನೇ ಅತಿ ಜನಪ್ರಿಯ ಆಟವೂ ಹೌದು. ನೆಚ್ಚಿನ ಕ್ರಿಕೆಟಿಗ ಬಳಸುವ ಬ್ಯಾಟ್ ಯಾವುದು ಎಂಬುದನ್ನು ನೋಡಿ ಅಭಿಮಾನಿಗಳು ಅನುಸರಿಸುತ್ತಾರೆ. ಅದೇ ಮಾದರಿಯ ಬ್ಯಾಟ್ಗಳು ಹೇರಳವಾಗಿ ಬಿಕರಿಯಾಗುತ್ತವೆ ಕೂಡ.
ಅಂದಹಾಗೆ ಇಂತಹ ಜಗತ್ಪ್ರಸಿದ್ಧ ಕ್ರೀಡೆಯಲ್ಲಿ ದಾಂಡಿಗರು ಬಳಸುವ ಬ್ಯಾಟ್‌ಗಳನ್ನು ಹೇಗೆ ತಯಾರಿಸುತ್ತಾರೆ. ಯಾವ ಮರದ ಕಟ್ಟಿಗೆಯನ್ನು ಇದಕ್ಕೆ ಬಳಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗನ ಕೈಯಲ್ಲಿರುವ ಬ್ಯಾಟ್‌ನ ಬೆಲೆ ಎಷ್ಟು ಎಂಬುದರ ಕುರಿತ ಇಂಟರೆಸ್ಟಿಂಗ್ ಮಾಹಿತಿ ತಿಳಿಯೋಣ.
ಬ್ಯಾಟ್‌ನ ನಿಯಮ ಮತ್ತು ಇತಿಹಾಸ: ಬ್ಯಾಟ್ ಎಂಬುದು ಕ್ರಿಕೆಟ್ನಲ್ಲಿ ಚೆಂಡನ್ನು ಹೊಡೆಯಲು ಬಳಸುವ ಸಾಧನ. 1624ರಲ್ಲಿ ಮೊದಲ ಬಾರಿಗೆ ಈ ಬ್ಯಾಟ್ ಅನ್ನು ಪರಿಚಯಿಸಲಾಯಿತು. ಬಳಿಕ 1979ರಲ್ಲಿ ಮರದಿಂದ ಮಾಡಿದ ಬ್ಯಾಟ್‌ಗಳನ್ನು ಮಾತ್ರ ಬಳಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಯಿತು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಳಕೆಯಾಗುವ ಬ್ಯಾಟ್ಗಳಿಗೆ ಹಲವು ನಿಯಮಗಳಿವೆ. ಬ್ಯಾಟ್‌ನ ಉದ್ದವು 38 ಇಂಚಿಗಿಂತ (96.5 ಸೆಂ) ಹೆಚ್ಚಿರಬಾರದು. ಅಗಲ 4.25 ಇಂಚು (10.8 ಸೆಂ) ಇರಬೇಕು. ಬ್ಯಾಟ್‌ನ ಹಿಡಿಕೆ(ಹ್ಯಾಂಡಲ್) 25.4 ರಿಂದ 30.5 ಸೆಂಟಿಮೀಟರ್ಗಳಷ್ಟಿರಬೇಕು. ಬಾಟಮ್ ಆಫ್ ದಿ ಬ್ಯಾಟ್ 10.8 ಸೆಂ.ಮೀ ಮತ್ತು ಬ್ಯಾಟ್‌ನ ಮಧ್ಯಭಾಗವು 2.64 ಸೆಂ.ಮೀ ಹಾಗೂ ಎಡ್ಜ್ ಆಫ್ ಬ್ಯಾಟ್ 0.11 ಸೆಂ.ಮೀ ಇರಬೇಕೆಂಬುದು ನಿಯಮ.
ಯಾವ ಮರದ ಕಟ್ಟಿಗೆ ಬಳಸ್ತಾರೆ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎರಡು ಬಗೆಯ ಬ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತದೆ. ಇವುಗಳನ್ನು ಕಾಶ್ಮೀರಿ ವಿಲೋ ಮತ್ತು ಇಂಗ್ಲಿಷ್ ವಿಲೋ ಎಂದು ಕರೆಯಲಾಗುತ್ತದೆ. ಈ ಎರಡೂ ಬ್ಯಾಟ್ಗಳಿಗೆ ಬಳಸಲಾಗುವ ಮರ ಮಾತ್ರ ಒಂದೇ. ಅದಕ್ಕೆ ವಿಲೋ ಅಂತಾರೆ. ಈ ಮರದ ಕಟ್ಟಿಗೆಯಿಂದಲೇ ಬ್ಯಾಟ್ ತಯಾರಾಗುತ್ತದೆ. ವಿಲೋ ಮರಗಳನ್ನು ಭಾರತದ ಕಾಶ್ಮೀರ ಮತ್ತು ಇಂಗ್ಲೆಂಡ್ನಲ್ಲಿ ಅತಿಹೆಚ್ಚಾಗಿ ಬೆಳೆಯಲಾಗುತ್ತದೆ. ವಿಶೇಷವೆಂದರೆ, ಈ ಎರಡು ಪ್ರದೇಶಗಳು ಮಾತ್ರ ವಿಲೋ ಮರ ಬೆಳೆಯಲು ಅತ್ಯುತ್ತಮ ಪ್ರದೇಶಗಳಾಗಿವೆ. ಪರಿಸರ ಮತ್ತು ವಾತಾವರಣಕ್ಕೆ ಅನುಗುಣವಾಗಿ ವಿಲೋ ಮರಗಳಲ್ಲಿ ವ್ಯತ್ಯಾಸಗಳಿವೆ.
ಕ್ರಿಕೆಟ್ ಬ್ಯಾಟ್‌ನ ಬೆಲೆ: ಕಾಶ್ಮೀರಿ ವಿಲೋ ಮತ್ತು ಇಂಗ್ಲೆಂಡ್ ವಿಲೋ ಮರದ ಬ್ಯಾಟ್ಗಳಿಗೆ ತಮ್ಮದೇ ಆದ ಗುಣವಿಶೇಷತೆ ಇರುವ ಕಾರಣ, ಬೆಲೆಯಲ್ಲೂ ವ್ಯತ್ಯಾಸವಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟಿಗರು ಬಳಸುವ ಕಾಶ್ಮೀರಿ ವಿಲೋ ಬ್ಯಾಟ್ಗೆ ಮಾರುಕಟ್ಟೆಯಲ್ಲಿ 3 ಸಾವಿರದಿಂದ ಹಿಡಿದು 70 ಸಾವಿರ ರೂಪಾಯಿವರೆಗೆ ದರ ಇದೆ. ಅದೇ ಇಂಗ್ಲೆಂಡ್ ವಿಲೋ ಬ್ಯಾಟ್ಗಳು 8 ಸಾವಿರಿಂದ 2 ಲಕ್ಷ ರೂಪಾಯಿವರೆಗೆ ಬಿಕರಿಯಾಗುತ್ತವೆ.
ಇದನ್ನೂ ಓದಿ: ಸಚಿನ್ ನಿರ್ಮಿಸಿರುವ ಈ 3 ದಾಖಲೆ ಮುರಿಯುವುದು ಕೊಹ್ಲಿಗೆ ಅಸಾಧ್ಯವೇ? - Sachin Tendlukar Records