ಪ್ಯಾರಿಸ್: ಭಾರತೀಯರ ಕೊನೆಯ ಆಸೆಯೂ ಇಂದು ಕಮರಿತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅನರ್ಹತೆಗೆ ಒಳಗಾಗಿದ್ದ ಕುಸ್ತಿಪಟು ವಿನೇಶ್ ಪೋಗಟ್ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ನಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ತಮ್ಮನ್ನು ಅನರ್ಹಗೊಳಿಸಿದ್ದ ಕ್ರಮವನ್ನು ವಿರೋಧಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ಕುಸ್ತಿಪಟು ಮತ್ತು ಭಾರತೀಯರಿಗೆ ತೀವ್ರ ನಿರಾಸೆ ಉಂಟಾಗಿದೆ.
ವಿನೇಶ್ ಫೋಗಟ್ ಅವರ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಎರಡು ಬಾರಿ ತೀರ್ಪನ್ನು ಮುಂದೂಡಿತ್ತು. ಕೊನೆಗೂ, ಬುಧವಾರ ರಾತ್ರಿ ಆದೇಶ ಹೊರಡಿಸಿದ್ದು, ಫೋಗಟ್ ಮನವಿಯನ್ನು ನಿರಾಕರಿಸಿದೆ. ಜೊತೆಗೆ, ಕ್ರೀಡಾ ನಿಯಮಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಕ್ರೀಡಾಪಟುಗಳ ಶಾರೀರಿಕ ಮತ್ತು ಮಾನಸಿಕ ಒತ್ತಡಗಳನ್ನು ಪರಿಗಣಿಸಿ ನಿಯಮ ರೂಪಿಸಿ ಎಂದು ಸಲಹೆ ನೀಡಿದೆ.
ತೀರ್ಪು ನಿರಾಸೆ ತಂದಿದೆ: ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮುಖ್ಯಸ್ಥೆ ಪಿ.ಟಿ.ಉಷಾ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದ ಸಿಎಎಸ್ ಆದೇಶವು ಅಚ್ಚರಿ ಮತ್ತು ನಿರಾಸೆ ತಂದಿದೆ. ಇದು ಕ್ರೀಡಾಪಟುವಿನ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಅನರ್ಹತೆಗೆ ವಿರುದ್ಧವಾಗಿ ಬೆಳ್ಳಿ ಪದಕವನ್ನು ನೀಡಬೇಕೆಂಬ ವಿನೇಶ್ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ನಿರ್ಧಾರವು ಕ್ರೀಡೆ ಮತ್ತು ಆಟಗಾರರ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಹೇಳಿದೆ.
ನಿಯಮ ಮರುಪರಿಶೀಲಿಸಿ: 100 ಗ್ರಾಂ ಕನಿಷ್ಠ ವ್ಯತ್ಯಾಸದಿಂದ ಅನರ್ಹಗೊಂಡ ವಿನೇಶ್ ಅವರು ನೊಂದು ವೃತ್ತಿ ಜೀವನದಿಂದಲೇ ಹಿಂದೆ ಸರಿದಿದ್ದಾರೆ. ಇದು ಅವರ ಮೇಲಾದ ಪರಿಣಾಮವನ್ನು ಸೂಚಿಸುತ್ತದೆ. ಅಸ್ಪಷ್ಟ ನಿಯಮಗಳು ಮತ್ತು ಅವುಗಳ ಮರುಪರಿಶೀಲಿಸುವ ಗಂಭೀರ ಚರ್ಚೆಗಳು ನಡೆಯಬೇಕು ಎಂದು ಐಒಎ ಹೇಳಿಕೆಯಲ್ಲಿ ತಿಳಿಸಿದೆ.
ಎರಡು ದಿನಗಳಲ್ಲಾಗುವ ದೇಹ ತೂಕದ ವ್ಯತ್ಯಾಸಕ್ಕೆ ಅಥ್ಲೀಟ್ ಒಬ್ಬ ಅನರ್ಹ ಶಿಕ್ಷೆಗೆ ಒಳಗಾದರೆ, ಇದು ನಿಯಮಗಳ ಲೋಪವೋ ಅಥವಾ ಕ್ರೀಡಾಪಟುವಿನ ಶ್ರಮದ ನೀರಲ್ಲಿ ಹೋಮವೋ ಎಂಬುದು ಪ್ರಶ್ನೆಯಾಗುತ್ತದೆ. ನಿಯಮಗಳ ಲೋಪದಿಂದ ಕ್ರೀಡಾಪಟುಗಳು, ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಕೋರ್ಟ್ ಮುಂದೆ ತನ್ನ ದೇಹ ತೂಕ ಹೆಚ್ಚಿದ್ದರ ಕಾರಣ ವಿವರಿಸಿದ ಕುಸ್ತಿಪಟು ವಿನೇಶ್ ಫೋಗಟ್ - Vinesh Phogat