ಬ್ರಿಡ್ಜ್ಟೌನ್ (ಬಾರ್ಬಡೋಸ್): ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಸ್ಫೋಟಕ ಅರ್ಧಶತಕ ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಅತ್ಯುತ್ತಮ ಬೌಲಿಂಗ್ ದಾಳಿ ನೆರವಿನಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ 47 ರನ್ಗಳ ಸುಲಭದ ಜಯ ದಾಖಲಿಸಿದೆ. ಬಾರ್ಬಡೋಸ್ನಲ್ಲಿನ ಗೆಲುವಿನೊಂದಿಗೆ ಸೂಪರ್- 8 ಹಂತದಲ್ಲಿ ರೋಹಿತ್ ಶರ್ಮಾ ಪಡೆಯು ಶುಭಾರಂಭ ಮಾಡಿದೆ.
ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದ ರೋಹಿತ್, ಕೇವಲ 8 ರನ್ಗೆ ಔಟಾದರು. 11 ರನ್ಗೆ ಮೊದಲ ವಿಕೆಟ್ ಪತನವಾದ ಬಳಿಕ ಕೊಹ್ಲಿ ಹಾಗೂ ಪಂತ್ ಉತ್ತಮ ಜೊತೆಯಾಟವಾಡಿದರು.
ತಂಡದ ಮೊತ್ತ 24 ರನ್ ಆಗಿದ್ದಾಗ ಉತ್ತಮವಾಗಿ ಆಡುತ್ತಿದ್ದ ಪಂತ್ರನ್ನು (20) ರಶೀದ್ ಖಾನ್ ಎಲ್ಬಿ ಬಲೆಗೆ ಬೀಳಿಸಿದರು. ಅದರ ಬೆನ್ನಲ್ಲೇ 24 ರನ್ ಬಾರಿಸಿದ್ದ ಕೊಹ್ಲಿ ಕೂಡ ರಶೀದ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ಗಿಳಿದ ಶಿವಂ ದುಬೆ ಒಂದು ಸಿಕ್ಸರ್ ಸಿಡಿಸಿ ಭರವಸೆ ಮೂಡಿಸಿದರೂ ಕೂಡ ಕೆಲ ಹೊತ್ತಲ್ಲೇ 10 ರನ್ಗೆ ಔಟಾಗಿ ಮತ್ತೆ ನಿರಾಸೆ ಮೂಡಿಸಿದರು. 94 ರನ್ಗೆ ಭಾರತದ 4 ವಿಕೆಟ್ ಉರುಳಿದ್ದವು.
ಈ ಹಂತದಲ್ಲಿ ಒಂದಾದ ಸೂರ್ಯಕುಮಾರ್ ಯಾದವ್ ಹಾಗೂ ಉಪ ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ 4ನೇ ವಿಕೆಟ್ಗೆ ಅಮೂಲ್ಯ 56 ರನ್ ಸೇರಿಸಿ, ತಂಡದ ಸ್ಕೋರ್ನ್ನು 150ಕ್ಕೆ ತಲುಪಿಸಿತು. ಅಫ್ಘನ್ ಸ್ಪಿನ್ ದಾಳಿಯನ್ನು ಕಾಡಿದ ಸೂರ್ಯಕುಮಾರ್ ಯಾದವ್ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಇವರಿಗೆ ಹಾರ್ದಿಕ್ (32) ಉತ್ತಮ ಸಾಥ್ ನೀಡಿದರು.
ಕೊನೆಯಲ್ಲಿ ಅಕ್ಷರ್ ಪಟೇಲ್ 12, ರವೀಂದ್ರ ಜಡೆಜಾ 7 ರನ್ ಗಳಿಸಿ ತಂಡದ ಮೊತ್ತವನ್ನು 8 ವಿಕೆಟ್ಗೆ 181ಕ್ಕೆ ಕೊಂಡೊಯ್ದರು. ಅಫ್ಘಾನಿಸ್ತಾನ ಪರ ಫಾರೂಕಿ 33ಕ್ಕೆ 3 ಹಾಗೂ ನಾಯಕ ರಶೀದ್ ಖಾನ್ 26 ರನ್ಗೆ 3 ವಿಕೆಟ್ ಪಡೆದರು.
ಅಫ್ಘಾನಿಸ್ತಾನದ ಇನ್ನಿಂಗ್ಸ್: 182 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲ್ಲೇ ಸಾಗಿತು. ತಂಡದ ಯಾವೊಬ್ಬ ಬ್ಯಾಟರ್ ಕೂಡ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಆರಂಭಿಕ ರಹ್ಮತುಲ್ಲಾ ಗುರ್ಬಾಜ್ 11 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನಿರೀಕ್ಷೆ ಹುಸಿಗೊಳಿಸಿದರು. ಇವರ ಬೆನ್ನಲ್ಲೇ ಇಬ್ರಾಹಿಂ ಝರ್ದನ್ (8) ಹಾಗೂ ಹಜ್ರತುಲ್ಲಾ ಝಾಜೈ (2) ಕೂಡ ಪೆವಿಲಿಯನ್ ಸೇರಿದರು. ಆರಂಭದಲ್ಲೆ 2 ವಿಕೆಟ್ ಕಿತ್ತ ವೇಗಿ ಬುಮ್ರಾ ಅಫ್ಘಾನಿಸ್ತಾನ ತಂಡದ ಮೇಲೆ ಒತ್ತಡ ಹೇರಿದರು.
23 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಗುಲ್ಬದ್ದೀನ್ ನೇಬ್ (17) ಹಾಗೂ ಅಜ್ಮತುಲ್ಲಾ ಓಮರ್ಜೈ (26) ನಾಲ್ಕನೇ ವಿಕೆಟ್ಗೆ 44 ರನ್ ಸೇರಿಸಿ ಅಲ್ಪ ಹೋರಾಟ ತೋರಿದರು. ಆದರೆ, ಇವರಿಬ್ಬರ ವಿಕೆಟ್ ಪತನದ ಬಳಿಕ ಅಫ್ಘನ್ ತಂಡ ಕುಸಿತದ ಹಾದಿ ಹಿಡಿಯಿತು.
ಬಳಿಕ 19 ರನ್ ಬಾರಿಸಿ ಆಡುತ್ತಿದ್ದ ನಜಿಬುಲ್ಲಾ ಜರ್ದಾನ್ ಅವರನ್ನು ಬುಮ್ರಾ ಪೆವಿಲಿಯನ್ಗೆ ಅಟ್ಟಿದರು. ಇವರ ಬೆನ್ನಲ್ಲೇ ಮೊಹಮದ್ ನಬಿ (14) ಕೂಡ ಕುಲದೀಪ್ ಬೌಲಿಂಗ್ನಲ್ಲಿ ಔಟಾದರು. ಅದಾಗಲೇ ಅಫ್ಘಾನಿಸ್ತಾನ ಸೋಲಿನತ್ತ ಮುಖ ಮಾಡಿತ್ತು. ನಾಯಕ ರಶೀದ್ 2 ರನ್ ಹಾಗೂ ನವೀನ್ ಉಲ್ ಹಕ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 12 ರನ್ ಗಳಿಸಿದ ನೂರ್ ಅಹ್ಮದ್ ಕೊನೆಯ ಎಸೆತದಲ್ಲಿ ರೋಹಿತ್ಗೆ ಕ್ಯಾಚ್ ನೀಡುವ ಮೂಲಕ ಅಫ್ಘನ್ನರು 20 ಓವರ್ಗಳಲ್ಲಿ ಕೇವಲ 134 ರನ್ಗೆ ಆಲೌಟ್ ಆದರು.
47 ರನ್ಗಳಿಂದ ಗೆದ್ದ ಭಾರತ ತಂಡ ಉತ್ತಮ ರನ್ರೇಟ್ ಪಡೆಯುವಲ್ಲಿ ಯಶಸ್ವಿಯಾಯಿತು. ಟೀಂ ಇಂಡಿಯಾ ಪರ ಬುಮ್ರಾ 7ಕ್ಕೆ 3, ಅರ್ಶದೀಪ್ 36ಕ್ಕೆ 3, ಕುಲದೀಪ್ 32ಕ್ಕೆ 2 ವಿಕೆಟ್ ಪಡೆದು ಅಫ್ಘಾನಿಸ್ತಾನ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಮುಂದಿನ ಪಂದ್ಯದಲ್ಲಿ ಜೂನ್ 22ರಂದು ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ.
ಇದನ್ನೂ ಓದಿ: ಟೀಂ ಇಂಡಿಯಾ ತವರಿನ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಪ್ರಕಟ - Team India Home Itinerary