ನ್ಯೂಯಾರ್ಕ್: ಇಲ್ಲಿನ ನಸ್ಸೌ ಕೌಂಟಿ ಮೈದಾನದ ದ್ವಿಸ್ವರೂಪಿ ಪಿಚ್ನಲ್ಲಿ ಆಡುವುದು ಸುಲಭವಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ತಂಡವು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಕೊನೆಯವರೆಗೂ ಹೋರಾಡುವ ಮೂಲಕ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ ಎಂದಿದ್ದಾರೆ.
ಅರ್ಷದೀಪ್ ಸಿಂಗ್ (9ಕ್ಕೆ 4 ವಿಕೆಟ್), ಸೂರ್ಯಕುಮಾರ್ ಯಾದವ್ (50*) ಮತ್ತು ಶಿವಂ ದುಬೆ (31*) ಜವಾಬ್ದಾರಿಯುತ ಆಟದಿಂದ ಯುಎಸ್ ವಿರುದ್ಧ ಬುಧವಾರ ಭಾರತವು 7 ವಿಕೆಟ್ ಜಯ ಗಳಿಸಿ ಸೂಪರ್-8ಕ್ಕೆ ತಲುಪಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ''ಪಿಚ್ನಲ್ಲಿ ಬ್ಯಾಟಿಂಗ್ ಕಠಿಣ ಎಂದು ನಮಗೆ ತಿಳಿದಿತ್ತು. ನಾವು ಕ್ರೀಸ್ನಲ್ಲಿ ದೃಢವಾಗಿ ನಿಂತು ಜೊತೆಯಾಟವಾಡಿ ಗೆದ್ದೆವು. ಪ್ರಬುದ್ಧತೆ ತೋರಿದ ಸೂರ್ಯ ಮತ್ತು ಶಿವಂ ದುಬೆಗೆ ಗೆಲುವಿನ ಶ್ರೇಯ ಸಲ್ಲಬೇಕು'' ಎಂದು ಹೇಳಿದರು.
''ನಸ್ಸೌ ಕೌಂಟಿ ಪಿಚ್ನಲ್ಲಿ ಆಡುವುದು ಸರಳವಲ್ಲ, ಸೂಪರ್-8ಕ್ಕೆ ತಲುಪಿರುವ ಸಮಾಧಾನವಿದೆ. ಈ ಮೈದಾನದಲ್ಲಿ ಪಂದ್ಯವನ್ನು ಯಾವ ತಂಡ ಬೇಕಾದರೂ ಗೆಲ್ಲಬಹುದು. ಎಲ್ಲಾ ಮೂರು ಪಂದ್ಯಗಳಲ್ಲಿ ನಾವು ಕೊನೆಯವರೆಗೂ ಹೋರಾಡಿ ಗೆದ್ದೆವು. ಈ ಗೆಲುವಿನಿಂದ ನಮ್ಮ ವಿಶ್ವಾಸ ಹೆಚ್ಚಿದೆ. ಸೂರ್ಯಕುಮಾರ್ ವಿಭಿನ್ನ ಆಟ ತೋರಿದರು. ಅನುಭವಿ ಆಟಗಾರರಿಂದ ನೀವು ನಿರೀಕ್ಷಿಸುವುದು ಅದನ್ನೇ. ಕೊನೆಯವರೆಗೂ ಕ್ರೀಸ್ನಲ್ಲಿದ್ದು, ಪಂದ್ಯ ಗೆಲ್ಲಿಸಿದರು'' ಎಂದು ಶ್ಲಾಘಿಸಿದರು.
''ರನ್ ಗಳಿಕೆ ಕಷ್ಟವಾಗಿದ್ದರಿಂದ ಬೌಲರ್‌ಗಳು ಮೇಲುಗೈ ಸಾಧಿಸುವುದು ಅಗತ್ಯವಿತ್ತು. ವಿಶೇಷವಾಗಿ ಅರ್ಷದೀಪ್ ಸೇರಿದಂತೆ ಎಲ್ಲಾ ಬೌಲರ್‌ಗಳೂ ಆ ಕೆಲಸ ಮಾಡಿದರು. ಬೌಲಿಂಗ್ ಆಯ್ಕೆಗಳು ಇರಬೇಕು, ಅಗತ್ಯವಿದ್ದಾಗ ನಾವು ಬಳಸಲು ಸಾಧ್ಯವಾಗುತ್ತದೆ. ವೇಗಿಗಳು ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿಂದ ದುಬೆಗೆ ಬೌಲಿಂಗ್ ನೀಡಲಾಯಿತು'' ಎಂದರು.
ಅಮೆರಿಕ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರೋಹಿತ್, ''ಅವರಲ್ಲಿ ಬಹಳಷ್ಟು ಮಂದಿ ಒಟ್ಟಿಗೆ ಕ್ರಿಕೆಟ್ ಆಡಿದ್ದು, ಪ್ರಗತಿಯನ್ನು ಕಂಡು ಬಹಳ ಸಂತಸವಾಗುತ್ತಿದೆ. ಕಳೆದ ವರ್ಷ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲೂ ಅವರ ಆಟವನ್ನು ನೋಡಿದ್ದೇನೆ. ಎಲ್ಲರೂ ಶ್ರಮವಹಿಸಿ ಆಡುತ್ತಾರೆ'' ಎಂದು ಹೇಳಿದರು.
ಭಾರತದ ಪರ ಟಿ20 ಪಂದ್ಯವೊಂದರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅರ್ಷದೀಪ್ ಮಾತನಾಡಿ, ''ನಾನು ವೇಗಿಗಳ ಸ್ನೇಹಿ ಪಿಚ್ನ ಸಂಪೂರ್ಣ ನೆರವನ್ನು ಪಡೆಯಲು ಬಯಸುತ್ತೇನೆ. ಕೊನೆಯ ಎರಡು ಪಂದ್ಯಗಳಲ್ಲಿ ಹೆಚ್ಚು ರನ್ ನೀಡಿದ್ದರ ಬಗ್ಗೆ ನನಗೆ ಸಂತಸವಿರಲಿಲ್ಲ. ತಂಡವು ನನ್ನ ಮೇಲೆ ಯಾವಾಗಲೂ ನಂಬಿಕೆ ತೋರಿ, ಬೆಂಬಲಕ್ಕೆ ನಿಂತಿದೆ. ಹೀಗಾಗಿ ಗೆಲುವಿಗೆ ನೆರವಾಗಬೇಕಿದೆ'' ಎಂದು ಹೇಳಿದರು.
''ವಿಕೆಟ್ ವೇಗದ ಬೌಲರ್‌ಗಳಿಗೆ ತುಂಬಾ ಅನುಕೂಲಕರವಾಗಿದೆ. ಕೆಲವೊಮ್ಮೆ ಬಾಲ್ಗಳು ಸೀಮ್ ಪಡೆಯವುದರಿಂದ ನಮಗೆ ಹೆಚ್ಚು ಸಹಕಾರಿಯಾಯಿತು. ನನ್ನ ಪ್ಲಾನ್ ಸರಳವಾಗಿದ್ದು, ಬಾಲ್ನ್ನು ಸರಿಯಾದ ಜಾಗದಲ್ಲಿ ಎಸೆದು ಸ್ವಿಂಗ್ ಮಾಡಲು ಯತ್ನಿಸಿದೆ. ರನ್ ಗಳಿಸಲು ಸುಲಭದ ಎಸೆತಗಳನ್ನು ಕೊಡಬಾರದು. ಹಾರ್ಡ್ ಲೆಂಥ್ನಲ್ಲಿ ಬೌಲಿಂಗ್ ಮಾಡುವುದು ನನ್ನ ಯೋಜನೆಯಾಗಿತ್ತು. ಪಿಚ್ನಲ್ಲಿ ನಮ್ಮ ಬ್ಯಾಟರ್ಗಳೂ ಕೂಡ ರನ್ ಗಳಿಸಲು ಕಷ್ಟಪಟ್ಟರು'' ಎಂದರು.
ಯುಎಸ್ಎ ಹಂಗಾಮಿ ನಾಯಕ ನಾಯಕ ಆರನ್ ಜೋನ್ಸ್ ಮಾತನಾಡಿ, ''ನಮ್ಮ ತಂಡ ಭಾರತಕ್ಕೆ ಸ್ಪರ್ಧೆಯೊಡ್ಡಿದರೂ ಕೂಡ ಹೆಚ್ಚಿನ ರನ್ ಕೊರತೆ ಅನುಭವಿಸಿದೆವು. ನಾವು 10-15 ರನ್ ಕಡಿಮೆ ಗಳಿಸಿದ್ದೆವು. 130 ರನ್ ಬಾರಿಸಿದ್ದರೆ ಅದೊಂದು ಕಠಿಣ ಮೊತ್ತವಾಗುತ್ತಿತ್ತು. ಕೆಲವೊಮ್ಮೆ ಹೀಗಾಗುತ್ತದೆ. ನಮ್ಮ ಆಟಗಾರರು ಶಿಸ್ತುಬದ್ಧ ಪ್ರದರ್ಶನ ತೋರಿದ್ದು, ಬೌಲಿಂಗ್ ಬಗ್ಗೆ ಹೆಮ್ಮೆಯಿದೆ'' ಎಂದು ಹೇಳಿದರು.
''ನಮಗೆ ಬಹಳ ಸಂತಸವಾಗುತ್ತಿದೆ. ನಾವು ಯುಎಸ್ ಕ್ರಿಕೆಟ್‌ಗಾಗಿ ಇದನ್ನೇ ಬಯಸಿದ್ದು, ಆಟವನ್ನು ಆನಂದಿಸುತ್ತಿದ್ದೇವೆ. ಸೋಲಿನ ಬಗ್ಗೆ ಮರುಪರಿಶೀಲಿಸುತ್ತೇವೆ. ಕೆಲ ಸಭೆಗಳನ್ನು ನಡೆಸಿ, ಕಮ್ಬ್ಯಾಕ್ ಮಾಡಲು ಯತ್ನಿಸುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮೆರಿಕ ತಂಡದ ನಿಯಮಿತ ನಾಯಕ ಮೊನಾಂಕ್ ಪಟೇಲ್ ಐರ್ಲೆಂಡ್ ವಿರುದ್ಧದ ಕೊನೆಯ ಪಂದ್ಯಕ್ಕೆ ಫಿಟ್ ಆಗಬೇಕಿದೆ ಎಂದು ಜೋನ್ಸ್ ಹೇಳಿದರು. ಸಣ್ಣ ಪ್ರಮಾಣದ ಗಾಯವಾಗಿದ್ದು, ಆ ಪಂದ್ಯಕ್ಕೆ ಅವರು ತಂಡಕ್ಕೆ ಮರಳಬಹುದು ಎಂದರು.
ಇದನ್ನೂ ಓದಿ: ಟಿ20 ವಿಶ್ವಕಪ್: ಅರ್ಷದೀಪ್ ಮಾರಕ ದಾಳಿ; ಅಮೆರಿಕ ಮಣಿಸಿ ಸೂಪರ್-8ಕ್ಕೆ ಭಾರತ ಲಗ್ಗೆ - India Enters super 8