ಮುಂಬೈ: ಇಲ್ಲಿನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮುಂಬೈ ಮತ್ತು ಬರೋಡಾ ನಡುವಿನ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಆದರೆ ಈ ಪಂದ್ಯದಲ್ಲಿ ಮುಂಬೈ ತಂಡದ ಇಬ್ಬರು ಬೌಲರ್ಗಳಾದ ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ಕ್ರಮವಾಗಿ 10-11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿ ಅಪರೂಪದ ಸಾಧನೆ ಮಾಡಿದ್ದಾರೆ. 78 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಂಥದ್ದೊಂದು ದಾಖಲೆ ಪುನರಾವರ್ತಿಸಿದೆ.
ಬರೋಡಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತನ್ನ ಎರಡನೇ ಇನಿಂಗ್ಸ್‌ನಲ್ಲಿ 337 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ 10 ಮತ್ತು 11ನೇ ಕ್ರಮಾಂಕದಲ್ಲಿ ಕ್ರೀಸ್‌ನಲ್ಲಿದ್ದ ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ಜೊತೆಯಾಗಿ ಶತಕ ದಾಖಲಿಸಿದರು. ಈ ಮೂಲಕ ತಮ್ಮ ತಂಡದ ಸ್ಕೋರ್ ಅನ್ನು 569 ರನ್‌ಗಳಿಗೆ ಕೊಂಡೊಯ್ದರು. 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ತನುಷ್ 129 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 120 ರನ್ ಗಳಿಸಿ ಅಜೇಯರಾಗುಳಿದರು. ತುಷಾರ್ 10 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 123 ರನ್‌ಗಳ ಅದ್ಭುತ ಇನಿಂಗ್ಸ್ ಕಟ್ಟಿದರು.
ತನುಷ್ ಮತ್ತು ತುಷಾರ್ ಅದ್ಭುತ ಶತಕಗಳ ನೆರವಿನಿಂದ ಮುಂಬೈ ತಂಡವು ಬರೋಡಾಗೆ 606 ರನ್‌ಗಳ ದೊಡ್ಡ ಗುರಿ ನೀಡಿ, ಪಂದ್ಯದಲ್ಲಿ ತನ್ನ ಹಿಡಿತ ಸಾಧಿಸಿತು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 384 ರನ್ ಗಳಿಸಿತ್ತು ಮತ್ತು ಬರೋಡಾವನ್ನು ಮೊದಲ ಇನಿಂಗ್ಸ್‌ನಲ್ಲಿ 348 ರನ್‌ಗಳಿಗೆ ಆಲೌಟ್ ಮಾಡಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ ನೀಡಿದ್ದ 606 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ್ದ ಬರೋಡಾ 3 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.
ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಬಾರಿಗೆ 10 ಮತ್ತು 11ನೇ ಕ್ರಮಾಂಕದಲ್ಲಿ ಶತಕ ಸಿಡಿಸಿರುವ ಜೋಡಿ ಎಂಬ ಹೆಗ್ಗಳಿಕೆಗೆ ತುಷಾರ್ ಮತ್ತು ತನುಷ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಇಂಥ ಅಮೋಘ ಬ್ಯಾಟಿಂಗ್ ಸಾಧನೆ 1946ರಲ್ಲಿ ದಾಖಲಾಗಿತ್ತು. ಇಂಡಿಯನ್ಸ್ ಮತ್ತು ಸರ್ರೆ ಪಂದ್ಯದಲ್ಲಿ, ಶುಟೆ ಬ್ಯಾನರ್ಜಿ ಮತ್ತು ಚಂದು ಸರ್ವಾಟೆ ಇದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ್ದರು.