ನವದೆಹಲಿ: ದೇಶದಲ್ಲಿ ಏಪ್ರಿಲ್ 19ರಿಂದ ಜೂನ್ 1ರ ನಡುವೆ ಸಾರ್ವತ್ರಿಕ ಚುನಾವಣೆಗಳು ನಡೆಯುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಯುಎಇಗೆ ಸ್ಥಳಾಂತರಿಸಲಾಗುತ್ತದೆ ಎಂಬ ಊಹಾಪೋಹಗಳನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಳ್ಳಿ ಹಾಕಿದ್ದಾರೆ.
ಏಳು ಹಂತಗಳಲ್ಲಿ ನಡೆಯಲಿರುವ ಚುನಾವಣೆಯ ಕಾರಣದಿಂದಾಗಿ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸುವ ಬಗ್ಗೆ ವದಂತಿಗಳು ಹಬ್ಬಿದ್ದವು. ಆಟಗಾರರಿಗೆ ತಮ್ಮ ಪಾಸ್‌ಪೋರ್ಟ್‌ಗಳನ್ನು ಆಯಾ ಫ್ರಾಂಚೈಸಿಗಳಿಗೆ ನೀಡಲು ತಿಳಿಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇವೆಲ್ಲ ಊಹಾಪೋಹಗಳನ್ನು ಶನಿವಾರ ಜಯ್ ಶಾ ಅಲ್ಲಗಳೆದಿದ್ದಾರೆ.
"ಇಡೀ ಐಪಿಎಲ್‌ನ ಎಲ್ಲಾ ಪಂದ್ಯಗಳು ಭಾರತದಲ್ಲಿಯೇ ನಡೆಯಲಿವೆ. ನಾವು ಐಪಿಎಲ್ ವೇಳಾಪಟ್ಟಿಯನ್ನು ರೂಪಿಸುತ್ತೇವೆ. ಅದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ" ಎಂದು ಅವರು ತಿಳಿಸಿದರು.
ಮೊದಲೆರಡು ವಾರಗಳ (ಏಪ್ರಿಲ್ 7ರವರೆಗೆ ನಡೆಯಲಿರುವ ಪಂದ್ಯಗಳು) ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮಾರ್ಚ್ 22ರಂದು ಚೆನ್ನೈ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎದುರಾಗಲಿವೆ.
ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿಕೆ: ''ಐಪಿಎಲ್ ಅನ್ನು ದೇಶದಿಂದ ಸ್ಥಳಾಂತರಿಸುವ ಯಾವುದೇ ಸಾಧ್ಯತೆ ಇಲ್ಲ. ಯುಎಇಯಲ್ಲಿ ಐಪಿಎಲ್ ನಡೆಯಲಿವೆ ಎನ್ನುವ ಎಲ್ಲಾ ವರದಿಗಳು ಆಧಾರರಹಿತ'' ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪ್ರತಿಕ್ರಿಯಿಸಿದ್ದಾರೆ.
ಮಾರ್ಚ್ 22ರಿಂದ 17ನೇ ಐಪಿಎಲ್ ಸೀಸನ್ ಆರಂಭವಾಗಲಿದೆ. ಮೊದಲ ಹಂತದಲ್ಲಿ 21 ಪಂದ್ಯಗಳ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಉಳಿದ ಪಂದ್ಯಗಳ ವೇಳಾಪಟ್ಟಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಐಪಿಎಲ್: ಪಂಜಾಬ್ ಕಿಂಗ್ಸ್ ತಂಡದ ನೂತನ ಜರ್ಸಿ ಅನಾವರಣ