ಹೈದರಾಬಾದ್: ಐಪಿಎಲ್ ಆಟಗಾರರ ರೀಟೈನ್ ಲಿಸ್ಟ್ ಬಿಡುಗಡೆಗೆ ಇನ್ನೂ ಒಂದು ದಿನ ಬಾಕಿ ಇದ್ದು ಭಾರಿ ಕುತೂಹಲ ಕೆರಳಸಿದೆ. ಅಕ್ಟೋಬರ್ 31ರ ಸಂಜೆಯೊಳಗೆ ಎಲ್ಲ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಂಡ ಆಟಗಾರರ ರೀಟೈನ್ ಪಟ್ಟಿಯನ್ನು ಬಿಡುಗಡೆ ಗೊಳಿಸಲಿವೆ. ಇದರ ನಡುವೆಯೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದರ ಬಗ್ಗೆ ತಿಳಿಸಿದ್ದಾರೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಿ ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ. ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುತ್ತದೆ ಇಲ್ಲವೆ ಎಂಬುದರ ಬಗ್ಗೆ ಭಜ್ಜಿ ಮಾತನಾಡಿದ್ದಾರೆ.
"ಕಳೆದ ಮೂರು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಉತ್ತಮವಾಗಿ ಆಡಿಲ್ಲ. ಆದರೆ, ಅದು ಚಾಂಪಿಯನ್ ತಂಡವಾಗಿದ್ದು, ತುಂಬಾ ಬಲಿಷ್ಠವಾಗಿದೆ. ನನಗೆ ತಿಳಿದಿರುವಂತೆ ಮುಂಬೈ ಫ್ರಾಂಚೈಸಿ ಅವರು ಖಂಡಿತವಾಗಿಯೂ ಮುಂದಿನ ಸೀಸನ್ ದೃಷ್ಠಿಯಲ್ಲಿಟ್ಟುಕೊಂಡು ತಂಡವನ್ನು ಕಟ್ಟಲು ಯೋಜಿಸಿದ್ದಾರೆ. ಹಾಗಾಗಿ ಈ ಬಾರಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ. ಆದಾಗ್ಯೂ, ಈ ವರ್ಷ ಅನುಭವಿ ಆಟಗಾರರನ್ನು ತಂಡಕ್ಕೆ ಸೇರಿಸುಕೊಳ್ಳವ ಸಾಧ್ಯತೆಯೂ ಇದೆ".
ಇದನ್ನೂ ಓದಿ: ಕನ್ನಡದಲ್ಲೇ ಕಾಮೆಂಟ್ ಮಾಡಿ ಮನಗೆದ್ದ ಎಬಿಡಿ: 'ಒಂದೇ ಹೃದಯವನ್ನು ಎಷ್ಟು ಬಾರಿ ಗೆಲ್ತೀರಿ' ಅಂದ್ರು ಫ್ಯಾನ್ಸ್!
"ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಲಾಗಿತ್ತು. ಹಾಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗುತ್ತದೆ ಎಂದು ಭಾವಿಸುತ್ತೇನೆ. ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ತಂಡದಲ್ಲಿ ಮುಂದುವರಿಯಲಿದ್ದಾರೆ. ಆದರೆ ರೋಹಿತ್ ಶರ್ಮಾರನ್ನು ಉಳಿಸಿಕೊಳ್ಳುವರೇ? ಇಲ್ಲವೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
"ರೋಹಿತ್ ಇತ್ತೀಚೆಗೆ ನಾಯಕನಾಗಿ ಟಿ20 ವಿಶ್ವಕಪ್ ಗೆದ್ದಿದ್ದಾರೆ. ಹಾಗಾಗಿ ಅವರನ್ನೂ ತಂಡ ಕೈಬಿಡಲ್ಲ ಅನಿಸುತ್ತದೆ. ಹಾಗಾಗಿ ಈ ನಾಲ್ವರು ತಂಡದಲ್ಲಿ ಇರುವುದು ಖಚಿತವೆನಿಸುತ್ತದೆ. ಐದನೇ ಆಟಗಾರನಾಗಿ ತಿಲಕ್ ವರ್ಮಾ ತಂಡಕ್ಕೆ ಸೇರಿಸಿಕೊಳ್ಳಬಹುದು. ಮುಂಬೈ ಇಂಡಿಯನ್ಸ್ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುವ ಆಟಗಾರರಲ್ಲಿ ತಿಲಕ್ ಕೂಡ ಒಬ್ಬರು. ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಮೆಗಾ ಹರಾಜು ನಡೆಯಲಿದೆ ಎಂದು ತಿಳಿಸಿದ್ದಾರೆ".
ಮುಂಬೈ ಇಂಡಿಯನ್ಸ್ ರಿಟೇನ್ ಪಟ್ಟಿ 2025 (ಅಂದಾಜು)
- ಸೂರ್ಯಕುಮಾರ್ ಯಾದವ್
- ಜಸ್ಪ್ರೀತ್ ಬುಮ್ರಾ
- ಹಾರ್ದಿಕ್ ಪಾಂಡ್ಯ
- ರೋಹಿತ್ ಶರ್ಮಾ
ಇದನ್ನೂ ಓದಿ: ರೋಹಿತ್, ಕೊಹ್ಲಿ ಟೆಸ್ಟ್ನಲ್ಲಿ ಕೊನೆಯ ಶತಕ ಸಿಡಿಸಿದ್ದು ಯಾವಾಗ ಗೊತ್ತಾ?