ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಅತಿ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ 17ನೇ ಆವೃತ್ತಿಯಲ್ಲಿ ಹೀನಾಯ ಆರಂಭ ಕಂಡಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದು, ತಂಡದ ನಿರ್ವಹಣೆ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಮೇಲೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ತಂಡ ಇನ್ನೂ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗದೇ ಇರುವುದು ಟೀಕೆಗೆ ಗುರಿಯಾಗಿದೆ. ಸಂತಸದ ಸಂಗತಿ ಎಂದರೆ ಗಾಯಗೊಂಡು ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದ ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡ ಸೇರಿಕೊಂಡಿದ್ದಾರೆ. ಕಳೆದ ವರ್ಷ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಸೂರ್ಯಕುಮಾರ್ ಪಾದದ ನೋವಿಗೆ ತುತ್ತಾಗಿದ್ದರು.
ಇದಾದ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ 4-5 ತಿಂಗಳಿಂದ ಕ್ರಿಕೆಟ್ನಿಂದ ವಿಮುಖರಾಗಿದ್ದರು. ಇದೀಗ ಸೂರ್ಯ ಮತ್ತೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ. ಜೊತೆಗೆ ತಂಡದ ಪರವಾಗಿ ಅಮೂಲ್ಯ ಪ್ರದರ್ಶನ ನೀಡುವ ಹೊಣೆಯೂ ಟಿ20 ತಜ್ಞ ಬ್ಯಾಟರ್ ಮೇಲಿದೆ.
ಅಭ್ಯಾಸದ ವೇಳೆ ಪ್ರಕಾಶಿಸಿದ 'ಸೂರ್ಯ': ತಂಡಕ್ಕೆ ಮರಳಿದ ಬೆನ್ನಲ್ಲೇ, ಅಭ್ಯಾಸ ಆರಂಭಿಸಿರುವ ಆಟಗಾರ, ನೆಟ್‌ನಲ್ಲಿ ಬೆವರಿಳಿಸಿದ್ದಾರೆ. ಜೊತೆಗೆ ಕೆಲವೊಂದಷ್ಟು ಭರ್ಜರಿ ಹೊಡೆತಗಳನ್ನು ಬಾರಿಸಿ ತಮ್ಮ ಖದರ್ ತೋರಿಸಿದ್ದಾರೆ. ಇದರ ವಿಡಿಯೋವನ್ನು ತಂಡದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಟಿ20 ಸ್ಪೆಷಲಿಸ್ಟ್ ಸೂರ್ಯ ಭರ್ಜರಿ ಬ್ಯಾಟಿಂಗ್ ಬೀಸುತ್ತಿರುವುದನ್ನು ಕಾಣಬಹುದು. ಮೈದಾನದಲ್ಲಿ ಓಡಿ ಬಾಲ್ಅನ್ನು ಕೂಡ ಹಿಡಿದಿದ್ದಾರೆ.
ಸೂರ್ಯಕುಮಾರ್ ವಿಚಿತ್ರ ಶಾಟ್‌ಗಳಿಂದಲೇ ಹೆಸರುವಾಸಿ. ಬಿರುಸಾದ ಬ್ಯಾಟಿಂಗ್ ಶೈಲಿಯಿಂದಾಗಿ ಅವರು ಎರುದಾಳಿ ತಂಡದ ಬೌಲರ್ಗಳ ದಿಕ್ಕು ತಪ್ಪಿಸುತ್ತಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸುವುದರಿಂದಾಗಿಯೇ ಅವರನ್ನು 'ಮಿಸ್ಟರ್ 360' ಎಂದೂ ಕರೆಯಲಾಗುತ್ತದೆ.
ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಏಪ್ರಿಲ್ 7 ರಂದು ತವರು ಮೈದಾನವಾದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದೆ. ವರದಿಗಳ ಪ್ರಕಾರ, ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ ಎಂದು ಹೇಳಲಾಗಿದೆ. ಗಾಯದಿಂದ ಚೇತರಿಸಿಕೊಂಡ ಬಳಿಕ ತವರು ನೆಲದಲ್ಲಿ ಆಡುವ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮುಂಬೈಗೆ ಜಯ ತಂದುಕೊಡುವ ಅವಕಾಶ ಸೂರ್ಯ ಅವರಿಗಿದೆ.
ಇದನ್ನೂ ಓದಿ: 'ನನ್ನ ತಂದೆ, ಯುವರಾಜ್, ಲಾರಾಗೆ ವಿಶೇಷ ಧನ್ಯವಾದಗಳು': ಅಭಿಷೇಕ್ ಶರ್ಮಾ - Abhishek Sharma