ಬೆಂಗಳೂರು: ದಕ್ಷಿಣ ಆಫ್ರಿಕಾ ಹಾಗೂ ಭಾರತದ ವನಿತೆಯರ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ಆಕರ್ಷಕ ಶತಕ ದಾಖಲಿಸಿ ಮಿಂಚಿದರು. ಇದರ ಫಲಿತವಾಗಿ ಭಾರತ ವನಿತೆಯರು 143 ರನ್ಗಳ ಗೆಲುವು ಸಾಧಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಸ್ಮೃತಿ ಮಂಧಾನ ಅವರ 6ನೇ ಶತಕವಾಗಿದ್ದು, ಭಾರತೀಯ ನೆಲದಲ್ಲಿ ಇದು ಅವರಿಗೆ ಮೊದಲ ಶತಕ ಎಂಬುದು ವಿಶೇಷ. ಭಾರತದ ನೆಲದಲ್ಲಿ ನಡೆದ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಪ್ರಥಮ ಬಾರಿಗೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ವನಿತೆಯರು 8 ವಿಕೆಟ್ಗೆ 265 ಗಳಿಸಿದರು. ಭಾರತೀಯರ ಬೌಲಿಂಗ್ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ಮಹಿಳೆಯರು 122 ರನ್ಗೆ ಆಲೌಟ್ ಆಗಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದರು.
ಸ್ಮೃತಿ ಮಂಧಾನ ಚೊಚ್ಚಲ ಶತಕ: ಭಾರತ ತಂಡದ ಹಿರಿಯ ಬ್ಯಾಟರ್ ಆಗಿರುವ ಸ್ಮೃತಿ ಮಂಧಾನ 2013ರ ಏಪ್ರಿಲ್‌ನಲ್ಲಿ ಅಹಮದಾಬಾದ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಮಾದರಿಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಅವರು ಏಕದಿನದಲ್ಲಿ 5 ಏಕದಿನ ಅಂತಾರಾಷ್ಟ್ರೀಯ ಶತಕಗಳನ್ನ ಬಾರಿಸಿದ್ದರು. ಇದೆಲ್ಲವೂ ವಿದೇಶಿ ನೆಲದಲ್ಲಿ ದಾಖಲಾಗಿದ್ದವು. ಇಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 127 ಎಸೆತಗಳಲ್ಲಿ 117 ರನ್ ಬಾರಿಸಿ ಪಾದಾರ್ಪಣೆ ಮಾಡಿದ 11 ವರ್ಷಗಳ ಬಳಿಕ ತವರಿನಲ್ಲಿ ತಮ್ಮ ಚೊಚ್ಚಲ ಶತಕದ ಕನಸು ನನಸಾಗಿಸಿಕೊಂಡರು.
7 ಸಾವಿರ ರನ್ ಶಿಖರ: ಇನ್ನು, ಈ ಶತಕದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಿದರು. ಇದರಿಂದ ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಪರ ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನೂ ಸಹ ಸ್ಮೃತಿ ಮಂಧಾನ ಬರೆದರು. ಇದಕ್ಕೂ ಮೊದಲು ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಅವರು 7 ಸಾವಿರ ರನ್ ಗಳಿಸಿದ ಮೊದಲ ಆಟಗಾರ್ತಿಯಾಗಿದ್ದಾರೆ.