ಮೋಕಿ (ಚೀನಾ): ಇಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಇಂದು ನಡೆದ ಈ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ 2-1 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿತು.
ಭಾರತ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ (13 ಮತ್ತು 19ನೇ ನಿಮಿಷ) ಎರಡು ಗೋಲು ಗಳಿಸಿದರು. ಪಾಕಿಸ್ತಾನ ಪರ ಅಹ್ಮದ್ ನದೀಮ್ (8ನೇ ನಿಮಿಷ) ಗೋಲು ಗಳಿಸಿದರು. ಇದರೊಂದಿಗೆ ಭಾರತ ಈ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿತು. ಅಲ್ಲದೇ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸತತ 17ನೇ ಗೆಲುವು ಇದಾಗಿದೆ. 2016ರಿಂದಲೂ ಪಾಕಿಸ್ತಾನ ಹಾಕಿ ತಂಡ ಭಾರತ ವಿರುದ್ದ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
ಈ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮವಾಗಿ ಆರಂಭವನ್ನು ಮಾಡಿದ್ದವು. ಪಾಕಿಸ್ತಾನದ ಸ್ಟಾರ್ ಆಟಗಾರ ಅಹ್ಮದ್ ನದೀಮ್ 8ನೇ ನಿಮಿಷದಲ್ಲಿ ತಂಡದ ಪರ ಮೊದಲ ಗೋಲು ಗಳಿಸಿದರು. ಇದಾದ ಬಳಿಕ 13ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಗೋಲು ಗಳಿಸಿ 1-1 ಅಂತರದಿಂದ ಮೊದಲ ಕ್ವಾರ್ಟರನಲ್ಲಿ ಸಮಬಲ ಸಾಧಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿ ಭಾರತವು 2-1 ರಿಂದ ಮುನ್ನಡೆ ಸಾಧಿಸಿತು. ಪಂದ್ಯದ 19ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಇದರ ಲಾಭ ಪಡೆದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತೊಮ್ಮೆ ಗೋಲ್ ಗಳಿಸುವಲ್ಲಿ ಯಶಸ್ವಿಯಾದರು. ಇದಾದ ನಂತರವೂ ಭಾರತ ತಂಡ ಗೋಲು ಗಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿರಾಮದ ವೇಳೆಗೆ ಭಾರತವು ಪಾಕಿಸ್ತಾನದ ವಿರುದ್ಧ 2-1 ಅಂತರದಿಂದ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್ನಲ್ಲೂ ಉಭಯ ತಂಗಳಿಗೆ ಗೋಲು ಗಳಿಸಲು ಸಾಧ್ಯವಾಗದೇ ಅದೇ ಅಂಕದೊಂದಿಗೆ ತಂಡಗಳು ಮುನ್ನಡೆದವು.
ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಪಾಕ್ ಆಟಗಾರರು ಗೋಲು ಗಳಿಸಲು ಸತತ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕ್ ತಂಡ ಭಾರತದ ಎದುರು ಸೋಲನ್ನೊಪ್ಪಿಕೊಂಡಿತು.