ಪಲ್ಲೆಕೆಲೆ(ಶ್ರೀಲಂಕಾ): ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಮಂಗಳವಾರ ಭಾರತ ರೋಚಕ ಗೆಲುವು ದಾಖಲಿಸಿತು. ಸಾಧಾರಣ ಮೊತ್ತದ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ಬೌಲಿಂಗ್ ಮ್ಯಾಜಿಕ್‌ಗೆ ಸಿಂಹಳೀಯರು ದಿಢೀರ್ ಕುಸಿದರು. ಇದರಿಂದ ಪಂದ್ಯ 'ಸೂಪರ್ ಓವರ್'ನತ್ತ ಸಾಗಿ ಅಂತಿಮವಾಗಿ ವಿಜಯ ಟೀಂ ಇಂಡಿಯಾ ಪಾಲಾಯಿತು. 3-0ರ ಅಂತರದಿಂದ ಸೂರ್ಯ ನಾಯಕತ್ವದ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡಿತು.
ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಸೂರ್ಯಕುಮಾರ್ ಯಾದವ್ ಬಳಗ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆದರೆ, ಬ್ಯಾಟರ್ಗಳಿಂದ ನಿರೀಕ್ಷಿತ ರನ್ ಹರಿದು ಬರಲಿಲ್ಲ. ಮಹೇಶ್ ತೀಕ್ಷಣ ಅವರ ತೀಕ್ಷ್ಣ ಬೌಲಿಂಗ್ ದಾಳಿಯಿಂದ ಭಾರತ ತಂಡವನ್ನು 137 ರನ್ಗಳ ಸಾಧಾರಣ ಮೊತ್ತಕ್ಕೆ ಲಂಕಾ ಕಟ್ಟಿ ಹಾಕಿತು.
ಕುಸಿದ ಭಾರತದ ಬ್ಯಾಟಿಂಗ್ ಬಲ: ಟೀಂ ಇಂಡಿಯಾದ ಆರಂಭಿಕ ಯಶಸ್ವಿ ಜೈಸ್ವಾಲ್ ಕೇವಲ 10 ರನ್ಗೆ ನಿರ್ಗಮಿಸಿದರು. ನಂತರ ಬಂದ ಸಂಜು ಸಮ್ಸನ್ ಶೂನ್ಯ ಸುತ್ತಿದರು. ರಿಂಕು ಸಿಂಗ್ 1 ರನ್ಗೆ ಪೆವಿಲಿಯನ್ ಸೇರಿದರು. ನಾಯಕ ಸೂರ್ಯ 8 ರನ್ ಗಳಿಸಲಷ್ಟೇ ಶಕ್ತರಾದರು. ಶಿವಂ ದುಬೆ 13 ರನ್ಗೆ ವಿಕೆಟ್ ಒಪ್ಪಿಸಿದರು. ಇದರಿಂದ 9 ಓವರ್ ಮುಗಿಯುವಷ್ಟರಲ್ಲೇ ತಂಡ 48 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
𝙒𝙄𝙉𝙉𝙀𝙍𝙎!
— BCCI (@BCCI) July 30, 2024
Congratulations to the @surya_14kumar-led side on clinching the #SLvIND T20I series 3⃣-0⃣ 👏👏
Scorecard ▶️ https://t.co/UYBWDRh1op#TeamIndia pic.twitter.com/h8mzFGpxf3
ಇದರ ನಡುವೆ ಮತ್ತೊಬ್ಬ ಆರಂಭಿಕ ಶುಭಮನ್ ಗಿಲ್ ಜೊತೆಗೂಡಿದ ರಿಯಾನ್ ಪರಾಗ್ ತಂಡಕ್ಕೆ ಚೇತರಿಕೆ ನೀಡಿದರು. 6ನೇ ವಿಕೆಟ್‌ಗೆ ಈ ಜೋಡಿ 54 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿತು. ಗಿಲ್ 37 ಎಸೆತಗಳಲ್ಲಿ 39 ರನ್ ಕಾಣಿಕೆ ನೀಡಿದರೆ, ಪರಾಗ್ 18 ಬಾಲ್ಗಳಲ್ಲಿ 26 ರನ್ ಕಲೆ ಹಾಕಿದರು. ಮತ್ತೊಂದೆಡೆ, ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 25 ರನ್ ಕೊಡುಗೆ ಇತ್ತರು. ರವಿ ಬಿಷ್ಣೋಯಿ 8 ರನ್ ಗಳಿಸಿ ಅಜೇಯರಾಗುಳಿದರು.
ಲಂಕಾ ಪರ ಮಹೇಶ್ ತೀಕ್ಷಣ 3 ವಿಕೆಟ್ ಪಡೆದು ಮಿಂಚಿದರೆ, ವನಿಂದು ಹಸರಂಗ 2 ಮತ್ತು ಚಾಮಿಂದು ವಿಕ್ರಮಸಿಂಘೆ, ಅಸಿತ್ ಫೆರ್ನಾಂಡೋ, ರಮೇಶ್ ಮೆಂಡಿಸ್ ತಲಾ 1 ವಿಕೆಟ್ ಪಡೆದರು.
ಸೂರ್ಯ, ರಿಂಕು, ಸುಂದರ್ ಆಕರ್ಷಕ ಬೌಲಿಂಗ್: ಭಾರತ ನೀಡಿದ 138 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಸಾಲ್ ಮೆಂಡಿಸ್ ಮೊದಲ ವಿಕೆಟ್‌ಗೆ 58 ರನ್ಗಳ ಜೊತೆಯಾಟ ನೀಡಿದರು. ಇದರ ನಡುವೆ ನಿಸ್ಸಾಂಕ 26 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಕುಸಲ್ ಪೆರೆರಾ ಕೂಡಾ ಮೆಂಡಿಸ್ ಅವರಿಗೆ ಉತ್ತಮ ಸಾಥ್ ನೀಡಿದರು.
ಇದರಿಂದಾಗಿ ಸಿಂಹಳೀಯರು 15.1 ಓವರ್‌ಗಳಲ್ಲಿ 1 ವಿಕೆಟ್‌ಗೆ 110 ರನ್ ಗಳಿಸಿ ಗೆಲುವಿನ ಹಾದಿಯಲ್ಲಿದ್ದರು. ಆದರೆ, ರಿಂಕು ಸಿಂಗ್, ನಾಯಕ ಸೂರ್ಯ, ವಾಷಿಂಗ್ಟನ್ ಸುಂದರ್ ಬೌಲಿಂಗ್ ಕೈಚಳಕದಿಂದ ಎದುರಾಳಿ ತಂಡ ಆಘಾತಕಾರಿಯಾಗಿ ಕುಸಿಯಿತು. 2ನೇ ವಿಕೆಟ್‌ಗೆ ಮೆಂಡಿಸ್ (43) ನಿರ್ಗಮನದ ನಂತರ ಯಾವೊಬ್ಬ ಬ್ಯಾಟರ್ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.
17ನೇ ಓವರ್ನಲ್ಲಿ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ನಂತರದ ಓವರ್ನಲ್ಲಿ ಬೌಲ್ ಮಾಡಿದ ರಿಂಕು 46 ರನ್ ಗಳಿಸಿ ಆಡುತ್ತಿದ್ದ ಪೆರೆರಾ ವಿಕೆಟ್ ಕಬಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅಲ್ಲದೇ, ಇದೇ ಓವರ್ನಲ್ಲಿ ರಮೇಶ್ ಮೆಂಡಿಸ್ ಅವರಿಗೂ ಪೆವಿಲಿಯನ್ ದಾರಿ ತೋರಿದರು.
ಕೊನೆಯ ಓವರ್ನಲ್ಲಿ ನಾಯಕ ಸೂರ್ಯ ತಾವೇ ಬೌಲಿಂಗ್ ಮಾಡಿ 2 ವಿಕೆಟ್ ಉರುಳಿಸಿದರು!. ಈ ಮೂಲಕ 20 ಓವರ್‌ಗಳಲ್ಲಿ ಲಂಕಾ 137 ರನ್ ಪೇರಿಸಿ ಗುರಿ ತಲುಪುವಲ್ಲಿ ಎಡವಿಬಿತ್ತು. ಭಾರತ ಪರ ರಿಂಕು ಸಿಂಗ್ 3 ರನ್ಗೆ 2 ವಿಕೆಟ್, ಸೂರ್ಯ 5 ರನ್ಗೆ 2 ವಿಕೆಟ್ ಕಬಳಿಸಿ ಬೌಲಿಂಗ್ನಲ್ಲೂ ಸೈ ಎನಿಸಿಕೊಂಡರು. ಅಲ್ಲದೇ, ವಾಷಿಂಗ್ಟನ್ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು.
ವಾಷಿಂಗ್ಟನ್ ಸುಂದರ್ 'ಸೂಪರ್' ಓವರ್: ಭಾರತ ನೀಡಿದ್ದ 138 ರನ್ ಟಾರ್ಗೆಟ್ ಪೂರೈಸುವಲ್ಲಿ ಶ್ರೀಲಂಕಾ ಸಫಲವಾಗದ ಕಾರಣ ಸೂಪರ್ ಓವರ್ ಆಡಿಸಲಾಯಿತು. ಈ ಓವರ್ನಲ್ಲೂ ವಾಷಿಂಗ್ಟನ್ ಸುಂದರ್ ಮ್ಯಾಜಿಕ್ ಮಾಡಿದರು. ಕೇವಲ 2 ರನ್ ನೀಡಿ 2 ವಿಕೆಟ್ ಪಡೆದರು. ಮತ್ತೊಂದೆಡೆ, ನಾಯಕ ಸೂರ್ಯ ಮೊದಲ ಎಸೆತವನ್ನೇ ಬೌಂಡರಿಯ ಗಡಿ ದಾಟಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ: ಏಷ್ಯನ್ ಕ್ರಿಕೆಟ್ ಮಂಡಳಿ: ಜಯ್ ಶಾ ಸ್ಥಾನಕ್ಕೆ ಪಾಕ್ ಕ್ರಿಕೆಟ್ ಮಂಡಳಿಯ ಹಾಲಿ ಅಧ್ಯಕ್ಷ ಮೊಹ್ಸಿನ್ ನಖ್ವಿ?