ಗಾಂಧಿನಗರ, ಗುಜರಾತ್: ಸೆಂಟ್ರಲ್ ಬೋರ್ಡ್ ಆಫ್ ಕ್ರಿಕೆಟ್ನಿಂದ ಆಯೋಜಿಸಿದ್ದ ಮಲ್ಟಿ ಡೇ ಕಪ್ ಟೂರ್ನಮೆಂಟ್ನ ದಿವನ್ ಬಲ್ಲುಬಾಯಿ ಅಂಡರ್ 19 ಕ್ರಿಕೆಟ್ನಲ್ಲಿ ದ್ರೋಣ್ ದೇಸಾಯಿ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಇಂಟರ್- ಸ್ಕೂಲ್ ಪಂದ್ಯದಲ್ಲಿ ದ್ರೋಣ್ ದೇಸಾಯಿ ಬರೋಬ್ಬರಿ 498 ರನ್ಗಳನ್ನು ಕಲೆ ಹಾಕುವ ಮೂಲಕ ಅದ್ಬುತ ಪ್ರದರ್ಶನ ತೋರಿದ್ದಾರೆ.
ಕಳೆದ 30 ವರ್ಷದಿಂದ ಈ ಟೂರ್ನ್ಮೆಂಟ್ನಲ್ಲಿ ಇಂತಹ ಸಾಧನೆ ಮಾಡಿದ ಮತ್ತೊಬ್ಬರಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಮಂಗಳವಾರ ಜೆಎಲ್ ಇಂಗ್ಲಿಷ್ ಸ್ಕೂಲ್ ಮತ್ತು ಕ್ಸಿವಿಯರ್ ಸ್ಕೂಲ್ ನಡುವೆ ಗಾಂಧಿನಗರ ಶಿವಾಯ್ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಿತು.
30 ವರ್ಷಗಳ ಈ ಟೂರ್ನ್ಮೆಂಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುವ ಜೊತೆಗೆ ಜೆಎಲ್ ಸೆಂಟ್ ಕ್ಸೆವಿಯರ್ ಶಾಲೆ, ಜೆಎಲ್ ಇಂಗ್ಲಿಷ್ ಸ್ಕೂಲ್ನ ಟೀಂ ಅನ್ನು ಭಾರಿ ಅಂತರದೊಂದಿಗೆ ಮಣಿಸಿ ಮೇರು ಸಾಧನೆ ಮಾಡಿದೆ. ಈ ಅಂತರ್ ಶಾಲಾ ಕ್ರಿಕೆಟ್ ಮ್ಯಾಚ್ನಲ್ಲಿ ಜೆಎಲ್ ಇಂಗ್ಲಿಷ್ ಸ್ಕೂಲ್ ಮೊದಲಿಗೆ ಬ್ಯಾಂಟಿಂಗ್ ಮಾಡಿ ಕೇವಲ 48 ರನ್ ಕಲೆ ಹಾಕಿತು. ಯಶ್ ದೇಸಾಯಿ ಮತ್ತು ದಶಿನ್ ಶರ್ಮಾ ಕ್ಸಿವಿಯರ್ ಶಾಲೆಯ ಪರ ತಲಾ ನಾಲ್ಕು ವಿಕೆಟ್ಗಳನ್ನು ಉರುಳಿಸಿ, ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಕ್ಸಿವಿಯರ್ ಶಾಲೆ 7 ವಿಕೆಟ್ ನಷ್ಟಕ್ಕೆ 844 ರನ್ ಕಲೆ ಹಾಕಿತು. ಇದರಲ್ಲಿ ದ್ರೋಣ್ ದೇಸಾಯು 320 ಬಾಲ್ಗಳನ್ನು ಎದುರಿಸಿ 498 ರನ್ ಗಳಿಸಿದರು. ಈ ವೇಳೆ ದ್ರೋಣ್ 86 ಬೌಂಡರಿ ಹಾಗೂ 7 ಸಿಕ್ಸರ್ಗೆ ಅಟ್ಟಿರುವುದು ವಿಶೇಷ. ಮತ್ತೊಂದು ಕಡೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜೆಎಲ್ ಇಂಗ್ಲಿಷ್ ಸ್ಕೂಲ್ ಟೀಂ ಕೇವಲ 92 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದಕೊಂಡಿತು. ಈ ಮೂಲಕ ಅದು ಭಾರಿ ಅಂತರದಲ್ಲಿ ಸೋಲು ಅನುಭವಿಸಿತು. ಈ ವಾರ್ಷಿಕ ಟೂರ್ನಮೆಂಟ್ ಅನ್ನು ಗುಜರಾತ್ ಕ್ರಿಕೆಟ್ ಅಸೋಸಿಯೆಷನ್ ಅಡಿ ಕಾರ್ಯನಿರ್ವಹಿಸುವ ಅಹಮದಾಬಾದ್ನ ಸೆಂಟ್ರಲ್ ಕ್ರಿಕೆಟ್ ಬೋರ್ಡ್ ಆಯೋಜಿಸಿತ್ತು.
ಯಾರಿದು ದ್ರೋಣ್ ದೇಸಾಯಿ?: ಅಹಮದಬಾದ್ನ ದ್ರೋಣ್ ದೇಸಾಯಿ ಯುವ ಕ್ರಿಕೆಟರ್ ಆಗಿದ್ದು, ಅಂಡರ್ 14ರ ಮಟ್ಟದಲ್ಲಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ಅದ್ಬುತ ಪ್ರದರ್ಶನದ ಬಳಿಕ ಇದೀಗ ದ್ರೋಣ್ ಎಲ್ಲರ ಚಿತ್ತವನ್ನು ಆಕರ್ಷಿಸಿದ್ದಾರೆ. ಅವರು ಗುಜರಾತ್ನ ಅಂಡರ್ 19 ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ವಲಯ ಮಾತನಾಡಿಕೊಳ್ಳುತ್ತಿದೆ.
ತನ್ನ ಸಾಧನೆ ಬಗ್ಗೆ ದ್ರೋಣ್ ಹೇಳುವುದಿಷ್ಟು: ತಮ್ಮ ಕ್ರಿಕೆಟ್ ಪಯಣದ ಬಗ್ಗೆ ಮಾತನಾಡಿದ ದ್ರೋಣ್, ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ನೋಡುತ್ತಾ ಪ್ರೋತ್ಸಾಹಿತರಾಗಿ ಬೆಳದವರು. 7ನೇ ವಯಸ್ಸಿಗೆ ಬ್ಯಾಟ್ ಹಿಡಿದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
’’ತಮ್ಮ ಈ ಎಲ್ಲಾ ಪ್ರಗತಿಗೆ ಅಪ್ಪನೇ ಕಾರಣ. ನನ್ನಲ್ಲಿರುವ ಸಾಮರ್ಥ್ಯವನ್ನು ಆರಂಭದಲ್ಲಿ ಗುರುತಿಸಿ, ಉತ್ತಮ ಕೋಚ್ ಒಬ್ಬರನ್ನು ಹುಡುಕಿ, ಉತ್ತಮ ತರಬೇತಿ ಕೊಡಿಸಿದರು. ಜೈಪ್ರಕಾಶ್ ಪಟೇಲ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆಡುತ್ತಿದ್ದೇನೆ. ಭವಿಷ್ಯದಲ್ಲಿ ನಾನು ಉತ್ತಮ ಹೆಸರುಗಳಿಸಬಹುದು ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ‘‘ ಅಂತಾರೆ ದ್ರೋಣ್.
ಈ ನಡುವೆ 500 ರನ್ ಗಳಿಸಬೇಕು ಎಂಬ ತಮ್ಮ ಆಸೆ ಈಡೇರಲಿಲ್ಲ, ಇದರಿಂದ ಕೊಂಚ ನಿರಾಸೆಗೆ ಒಳಗಾಗಿದ್ದು ನಿಜ ಎಂದು ದ್ರೋಣ ಬೇಸರ ಕೂಡಾ ವ್ಯಕ್ತಪಡಿಸಿದ್ದಾರೆ. ಫೀಲ್ಡ್ನಲ್ಲಿ ಯಾವುದೇ ಸ್ಕೋರ್ ಬೋರ್ಡ್ ಇರಲಿಲ್ಲ. ನನ್ನ ತಂಡ ಕೂಡ ನಾನು 498 ರನ್ ಹೊಡೆದ ಬಗ್ಗೆ ತಿಳಿಸಲಿಲ್ಲ. ಆದರೆ, ಅಷ್ಟು ರನ್ ಗಳಿಸಿದ ಸಂತೋಷ ಮಾತ್ರ ನನಗಿದೆ ಎಂದು ಇದೇ ಗಳಿಗೆಯಲ್ಲಿ ಹರ್ಷವನ್ನೂ ವ್ಯಕ್ತಪಡಿಸಿದ್ದಾರೆ.
320 ಬಾಲ್ಗಳನ್ನು ಎದುರಿಸಿದ ದ್ರೋಣ್ ಬರೋಬ್ಬರಿ 86 ಬೌಂಡರಿಗಳನ್ನು ಬಾರಿಸಿದರು. ಅಷ್ಟೇ ಅಲ್ಲ 7 ಸಿಕ್ಸರ್ಗಳನ್ನು ಎತ್ತುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ದ್ರೋಣ ಬಂಡೆಯಂತೆ ಮೈದಾನದಲ್ಲಿ ನಿಂತು ಸುಮಾರು 372 ನಿಮಿಷಗಳ ಕಾಲ ಆಟವಾಡಿದ್ದಾರೆ.
ಈ ಹಿಂದೆಯೂ ಇಂತಹ ಸಾಧನೆಗಳು ಮೂಡಿ ಬಂದಿವೆ; ಇಷ್ಟು ಬೃಹತ್ ಮೊತ್ತ ದಾಖಲಿಸಿದ ದೇಶದ ಆರನೇ ಆಟಗಾರ ಎಂಬ ಕೀರ್ತಿಗೂ ಇವರು ಭಾಜನರಾಗಿದ್ದಾರೆ. ಈ ಮುಂಚೆ ಮುಂಬೈನ ಪ್ರಣವ್ ಧನವಾಡೆ 1009 (ನಾಟ್ ಔಟ್) ಗಳಿಸಿದರೆ, ಪೃಥ್ವಿ ಶಾ 546, ಡಾ ಹೆವ್ವಾಲ್ 515, ಚಮನ್ಲಾಲ್ - 506 (ನಾಟ್ ಔಟ್), ಅರ್ಮಾನ್ ಜಾಫರ್ (498) ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಐಸಿಸಿ ಟೆಸ್ಟ್ ಶ್ರೇಯಾಂಕ: ಶತಕ ಸಿಡಿಸಿ ಅಗ್ರ 6ನೇ ಸ್ಥಾನಕ್ಕೆ ಪಂತ್ ಲಗ್ಗೆ, ಕುಸಿದ ರೋಹಿತ್- ಕೊಹ್ಲಿ -