ನವದೆಹಲಿ: ಆಲ್ರೌಂಡರ್ ಅಕ್ಷರ್ ಪಟೇಲ್, ನಾಯಕ ರಿಷಭ್ ಪಂತ್ರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ವಿರುದ್ದ 4 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ಗಳನ್ನು ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ನಾಯಕ ಶುಭಮನ್ ಗಿಲ್ (6) ವಿಕೆಟ್ ಕಳೆದುಕೊಂಡಿತು. ಆದರೂ ಧೃತಿಗೆಡದೇ ಹೋರಾಟ ಮುಂದುವರೆಸಿತು. ವೃದ್ದಿ ಮಾನ್ ಸಾಹ (39) ಮತ್ತು ಸಾಯಿ ಸುದರ್ಶನ್ (65) ಜೋಡಿ 82 ರನ್‌ಗಳ ಜತೆಯಾಟವಾಡಿ ತಂಡದ ಸ್ಕೋರ್ ಹೆಚ್ಚಿಸಿದರು. ಬಳಿಕ 3 ಓವರ್ಗಳ ಅಂತರದಲ್ಲಿ ಸಹಾ, ಕುಲ್ದೀಪ್ ಬಲೆಗೆ ಬಿದ್ದರೆ, ಸಾಯಿ ಸುದರ್ಶನ್ ರಸಿಖ್ ಬಲೆಗೆ ಬಿದ್ದು ಹೊರನಡೆದರು. ಓಮರ್ಝಾಯಿ, ಶಾರುಖ್, ತೆವಾಟಿಯಾ ಕೂಡ ಬಹುಬೇಗ ನಿರ್ಗಮಿಸುವ ಮೂಲಕ ತಂಡಕ್ಕೆ ಒತ್ತಡ ಹೆಚ್ಚಿತ್ತು. ಈ ವೇಳೆ, ಜವಾಬ್ದಾರಿ ಹೊತ್ತ ಕ್ರೀಸ್ಗಿಳಿದಿದ್ದ ಮಿಲ್ಲರ್ (55) ಬಿರುಸಿನ ಬ್ಯಾಟ್ ಮಾಡಿ ಅರ್ಧಶತಕ ಸಿಡಿಸಿ ಔಟಾದಾಗ ತಂಡದ ಗೆಲುವಿಗೆ 35 ರನ್ಗಳು ಬೇಕಿತ್ತು. ಕೊನೆಯಲ್ಲಿ ಸಾಯಿ ಕಿಶೋರ್ ಮತ್ತು ರಶೀದ್ ಖಾನ್ ಗೆಲುವಿನ ದಡ ಸೇರಿಸಲು ಪ್ರಯತ್ನ ಪಟ್ಟು ವಿಫಲರಾದರು. ಅಂತಿಮವಾಗಿ ತಂಡ 4 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಡೆಲ್ಲಿ ಪರ ರಶಿಖ್ 3 ಹಾಗೂ ಕುಲದೀಪ್ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭವೂ ಕಳಪೆಯಾಗಿತ್ತು. ಪವರ್‌ಪ್ಲೇಯೊಳಗೆ ತಂಡ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರ ಪೃಥ್ವಿ ಶಾ (11), ಫ್ರೇಸರ್ (23) 35 ರನ್‌ಗಳ ಜೊತೆಯಾಟವಾಡಿ ನಿರ್ಗಮಿಸಿದರು. ಶಾಯ್ ಹೋಪ್ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು. ಇದಾದ ನಂತರ ಅಕ್ಷರ್ ಪಟೇಲ್ ಮತ್ತು ರಿಷಭ್ ಪಂತ್ ನಡುವೆ ಶತಕದ ಜೊತೆಯಾಟವಿತ್ತು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 68 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟವಾಡಿದರು. ಅಕ್ಷರ್ ಪಟೇಲ್ 43 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದರೇ, ನಾಯಕ ರಿಷಭ್ ಪಂತ್ 43 ಎಸೆತಗಳಲ್ಲಿ 88 ರನ್ ಗಳಿಸಿ ಅಜೇಯರಾಗಿ ಉಳಿದರು. ಗುಜರಾತ್ ಪರ ಸಂದೀಪ್ ವಾರಿಯರ್ 3 ವಿಕೆಟ್ ಪಡೆದರೇ, ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 73 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.
ಇದನ್ನೂ ಓದಿ: 51ನೇ ವಸಂತಕ್ಕೆ ಕಾಲಿಟ್ಟ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ - Sachin Tendulkar Birthday